ಮೂಢನಂಬಿಕೆ ಬಿಟ್ಟು ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಿಸಿ: ಶಾಸಕ ರವಿಕುಮಾರ್ ಗಣಿಗ ಕಿವಿಮಾತು

MLA Ravikumar launched a vaccination campaign for foot and mouth fever
Published on

ಮಂಡ್ಯ: ರೈತರು ಮೂಢನಂಬಿಕೆಗಳನ್ನು ತ್ಯಜಿಸಿ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಆ ಮೂಲಕ ರಾಸುಗಳನ್ನು ಉಳಿಸಬೇಕೆಂದು ಶಾಸಕ ರವಿಕುಮಾರ್ ಗಣಿಗ ಸಲಹೆ ನೀಡಿದರು.

ತಾಲೂಕಿನ ಕನ್ನಲಿ ಗ್ರಾಮದಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯ ತನ್ನ ಸದೃಢ ಆರೋಗ್ಯದತ್ತ ನಿಗಾ ವಹಿಸುವಂತೆ ತಮ್ಮ ಜೀವನೋಪಾಯಕ್ಕೆ ನೆರವಾಗುವ ಜಾನುವಾರುಗಳ ಆರೋಗ್ಯ ರಕ್ಷಣೆಗೂ ಕಾಳಜಿ ತೋರಬೇಕು. ಜಾನುವಾರುಗಳಿಗೆ ಮಾರಕವಾಗಲಿರುವ ಕಾಲುಬಾಯಿ ಜ್ವರ ನಿಯಂತ್ರಿಸುವ 4ನೇ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ. ರೈತರು ತಪ್ಪದೇ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದರು.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್.ಡಿ.ರಮೇಶ್‌ರಾಜು ಮಾತನಾಡಿ, ಮಂಡ್ಯ ತಾಲೂಕಿನಲ್ಲಿ 84 ಸಾವಿರ ದನ, ಎಮ್ಮೆ, ಹಂದಿ ಸೇರಿದಂತೆ ಇತರೆ ಜಾನುವಾರುಗಳಿದೆ. ಅವುಗಳ ಮಾಲೀಕರು ಲಸಿಕೆ ಹಾಕಿಸಲು ಮುತುವರ್ಜಿ ತೋರಬೇಕು. ಈ ಅಭಿಯಾನ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ರಾಜ್ಯ, ಜಿಲ್ಲೆ, ತಾಲೂಕಿನಾದ್ಯಂತ ಒಂದು ತಿಂಗಳ ಕಾಲ ಉಚಿತ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಕಾಲುಬಾಯಿ ರೋಗದ ಅರಿವು ಬಗ್ಗೆ ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ವೀಣಾ, ಡಾ.ಎಚ್.ಸಿ.ಶಿವಯ್ಯ, ಡಾ.ಗೀತಾ, ಡಾ.ಯೋಗೇಶ್‌ಗೌಡ, ಡಾ.ಮಂಜೇಶ್‌ಗೌಡ, ಡಾ.ಹೊಂಬೇಗೌಡ, ಮರಿಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net