

ಮಂಡ್ಯ: ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ತಾಲೂಕಿನ ಕಲ್ಲಹಳ್ಳಿ-ಕೋಣನಹಳ್ಳಿ ಹಾಗೂ ಬೂದನೂರು ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿ ಬೋಟಿಂಗ್ ಪಾಯಿಂಟ್ ಮತ್ತು ಜಲಕ್ರೀಡೆಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ನಗರದ ಹೊರವಲಯದ ಕಲ್ಲಹಳ್ಳಿ-ಕೋಣನಹಳ್ಳಿ ಮತ್ತು ತಾಲೂಕಿನ ಬೂದನೂರು ಕೆರೆಯನ್ನು ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಕಲ್ಲಹಳ್ಳಿ-ಕೋಣನಹಳ್ಳಿ ಕೆರೆ ಅಭಿವೃದ್ಧಿಗೆ ಸರ್ಕಾರದಿಂದ 2.50 ಕೋಟಿ ರೂ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ 1.50 ಕೋಟಿ ರೂ ಸೇರಿದಂತೆ ಒಟ್ಟು 4 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಅಂತೆಯೇ ಕೆರೆ ಏರಿ ಮೇಲೆ ವಾಯುವಿಹಾರ ನಡೆಸಲು ವಾಕಿಂಗ್ ಪಾಥ್, ಮಧ್ಯದಲ್ಲಿ ನಡುಗಡ್ಡೆ ನಿರ್ಮಾಣ, ಕೆರೆಯಲ್ಲಿ ತುಂಬಿರುವ ಹೂಳು, ಕಳೆ ತೆಗೆದು ಸ್ವಚ್ಛಗೊಳಿಸುವುದರ ಜತೆಗೆ ನೀರು ಸೋರಿಕೆಯಾಗದಂತೆ ತಡೆಗಟ್ಟಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಕೆರೆ ಏರಿ ಮೇಲೆ ವಾಕಿಂಗ್ ಪಾಥ್ ನಿರ್ಮಾಣ ಮಾಡುವುದರಿಂದ ಒಲಂಪಿಕ್ ಕ್ರೆಡಾಪಟುಗಳಿಗೆ ಅನುಕೂಲವಾಗುವುದರ ಜತೆಗೆ ಜನಸಾಮಾನ್ಯರು ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ವಾಯು ವಿಹಾರ ನಡೆಸಲು ಅನುಕೂಲವಾಗುತ್ತದೆ. ಮೇಲುಕೋಟೆ ರಸ್ತೆಯ ಶಂಕರಪುರಕ್ಕೆ ಹೊಂದಿಕೊಂಡಿರುವ ಸಂತೆಮಾಳದಲ್ಲಿ ಸಂತೆ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆ ಸ್ಥಳವನ್ನು ಉಪಯೋಗಿಸಿಕೊಂಡು ಮಕ್ಕಳ ಆಟಿಕೆಗಳು ಇತರೆ ಕ್ರೀಡಾ ಚಟುವಟಿಕೆಗಳನ್ನು ನಿರ್ಮಿಸುವುದರ ಜತೆಗೆ ಫುಡ್‌ಕೋರ್ಟ್ ನಿರ್ಮಿಸಿ ಭಾನುವಾರ ಮತ್ತು ರಜಾ ದಿನಗಳಂದು ಪ್ರವಾಸಿ ತಾಣವಾಗಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ತಾಲೂಕಿನ ಬೂದನೂರು ಗ್ರಾಮದಲ್ಲಿರುವ ಅನಂತಪದ್ಮನಾಭಸ್ವಾಮಿ ಮತ್ತು ಕಾಶಿ ವಿಶ್ವನಾಥ ದೇವಾಲಯಗಳ ಅಭಿವೃದ್ಧಿ ಮಾಡಿ ಬೂದನೂರು ಉತ್ಸವವನ್ನು ಯಶಸ್ವಿಯಾಗಿ ಮಾಡಲಾಗಿದೆ. ಪ್ರವಾಸಿಗರನ್ನು ಸೆಳೆಯಲು ಬೂದನೂರು ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಕೆರೆ ಅಭಿವೃದ್ಧಿಗೆ 4.50 ಕೋಟಿ ರೂ ಮಂಜೂರಾಗಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ಆರಂಭಿಸಿ ಕೆರೆ ಏರಿ ಮೇಲೆ ವಾಕಿಂಗ್ ಪಾಥ್, ನಡುಗಡ್ಡೆ ಅಭಿವೃದ್ಧಿ, ನೀರು ಸೋರಿಕೆ ತಡೆ ಮತ್ತಿತರರು ಅಭಿವೃದ್ಧಿ ಕೆಲಸ ಮಾಡುವುದರ ಜತೆಗೆ ಜಲಕ್ರೀಡೆ, ಬೋಟಿಂಗ್ ನಡೆಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಗುತ್ತಲು ಕೆರೆ ಅಭಿವೃದ್ದಿಗೆ 7.50 ಕೋಟಿ ರೂ ಮಂಜೂರಾಗಿದ್ದು, ಅಲ್ಲಿ ಜಲಕ್ರೀಡೆಗೆ ಯೋಜನೆ ರೂಪಿಸಲು ಸಾಧ್ಯವಿಲ್ಲ. ಈಗಾಗಲೇ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಿಸಲು ಕಾರ್ಯ ಯೋಜನೆ ಸಿದ್ಧಪಡಿಸಲಾಗಿದೆ. ಹಾಗಾಗಿ ಅದನ್ನು ಅಷ್ಟಕ್ಕೆ ಮಾತ್ರ ಸೀಮಿತಗೊಳಿಸಲಾಗುವುದು. ತಾಲೂಕಿನ ಕೆರಗೋಡು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಕೆರೆ ಅಭಿವೃದ್ಧಿಗೂ 4.50 ಕೋಟಿ ರೂ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ. ಈ ಸಂಬಂಧ ಶೀಘ್ರ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ರವಿಕುಮಾರ್ ಗಣಿಗ ಅವರು ದೂರದೃಷ್ಟಿತ್ವದಿಂದ ಮಂಡ್ಯ ನಗರ ವ್ಯಾಪ್ತಿಯಲ್ಲಿ ಕಲ್ಲಹಳ್ಳಿ-ಕೋಣನಹಳ್ಳಿ ಮತ್ತು ಬೂದನೂರು ಕೆರೆಯನ್ನು ಅಭಿವೃದ್ಧಿಗೊಳಿಸಿ, ಪ್ರವಾಸಿತಾಣಗಳನ್ನಾಗಲು ಮಾಡುವ ಗುರಿ ಹೊಂದಲಾಗಿದೆ. ಜತೆಗೆ ವಿವಿಧ ಸೌಲಭ್ಯ ಕಲ್ಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಗುವುದು. ಕಾವೇರಿ ನೀರಾವರಿ ನಿಗಮದಿಂದ ಅನುದಾನ ತಂದು ಸಮರ್ಪಕವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ಮುಡಾ ಅಧ್ಯಕ್ಷ ನಯೀಂ, ನಿರ್ದೇಶಕ ಎಂ.ಕೃಷ್ಣ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಆರ್‌ಎಪಿಸಿಎಂಎಸ್ ನಿರ್ದೇಶಕ ಕೆ.ಸಿ.ರವೀಂದ್ರ, ಮುಖಂಡರಾದ ರಾಜು, ಅನೂಪ್, ಚಂದ್ರಶೇಖರ್, ಚಂದ್ರಣ್ಣ, ಮಧುಕುಮಾರ್ ಹಾಜರಿದ್ದರು.