ಬಸರಾಳು ಹೋಬಳಿಗೆ ಕಾವೇರಿ ನೀರು: ಅನುಮೋದನೆಗೆ ಶಾಸಕ ರವಿಕುಮಾರ್ ಗಣಿಗ ಪ್ರಸ್ತಾವನೆ

MLA Ravikumar Ganiga proposes approval of irrigation project Mandya
Published on

ಮಂಡ್ಯ: ಹೇಮಾವತಿ ನದಿ ನೀರು ಹಾಗೂ ಮಳೆಯನ್ನು ಆಶ್ರಯಿಸಿರುವ ಮಂಡ್ಯ ವಿಧಾನಸಭಾ ಕ್ಷೇತ್ರದ ಬಸರಾಳು ಹೋಬಳಿಗೆ ಕಾವೇರಿ ನೀರನ್ನು ಒದಗಿಸುವ ನಿಟ್ಟಿನಲ್ಲಿ ಶಾಸಕ ರವಿಕುಮಾರ್ ಗಣಿಗ ಅವರು ಸಣ್ಣ ನೀರಾವರಿ ಸಚಿವ ಎನ್.ಬೋಸರಾಜು ಅವರನ್ನು ಭೇಟಿ ಮಾಡಿದ್ದಾರೆ. ಮಾತ್ರವಲ್ಲದೆ ನೀರಾವರಿ ಸೌಲಭ್ಯದ ಅವಶ್ಯಕತೆ ಬಗ್ಗೆ ವಿಸ್ತೃತವಾಗಿ ವಿವರಿಸಿದ್ದಾರೆ.

ಬಸರಾಳು ಹೋಬಳಿಗೆ ಸಮರ್ಪಕ ನೀರಾವರಿ ಸೌಲಭ್ಯವಿಲ್ಲ. ಕೆಆರ್‌ಎಸ್ ಅಣೆಕಟ್ಟೆ ಕೆಲವೇ ಕಿ.ಮೀ ದೂರದಲ್ಲಿದ್ದರೂ ಬಸರಾಳು ಭಾಗಕ್ಕೆ ಕಾವೇರಿ ನೀರು ಬರಲ್ಲ. ಪರಿಣಾಮ ಇಂದಿಗೂ ಭತ್ತ ಬೆಳೆಯಲು ಆ ಭಾಗದ ಜನರಿಗೆ ಸಮಸ್ಯೆಯಾಗಿದೆ. ಅಂತೆಯೇ ರಾಗಿ, ಜೋಳದ ಬೆಳೆಯನ್ನು ಅವಲಂಬಿಸಿದ್ದಾರೆ. ಹೇಮಾವತಿ ಡ್ಯಾಂನಿಂದ ಸುಮಾರು 250 ಕಿ.ಮೀ ನೀರು ಹರಿಸಿ ಬಸರಾಳು ಭಾಗಕ್ಕೆ ಹರಿಸಲಾಗುತ್ತಿದೆ. ಆದರೆ ನಾಲೆಗಳ ಮೂಲಕ ಸರಿಯಾಗಿ ನೀರು ತಲುಪುವುದಿಲ್ಲ. ಈಗಾದರೆ ರೈತರು ಕೃಷಿ ಚಟುವಟಿಕೆ ಮಾಡುವುದಾದರೂ ಹೇಗೆ?. ಆದ್ದರಿಂದ ಕಾವೇರಿ ನೀರು ಪೂರೈಸಲು ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರ ಮನವಿಗೆ ಸ್ಪಂದಿಸಿರುವ ಸಚಿವ ಎನ್.ಬೋಸರಾಜು, ಸಿಎಂ ಜತೆಗೆ ಚರ್ಚೆ ಮಾಡಲಾಗುವುದು. ಸಚಿವ ಸಂಪುಟದಲ್ಲಿ ವಿಷಯ ಪ್ರಸ್ತಾಪಿಸಿ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅದೇ ರೀತಿ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ 25 ಬೋರ್‌ವೆಲ್ ಕೊರೆಸಲು ಹಾಗೂ ಬಸರಾಳು ಹೋಬಳಿಗೆ ನಾಲ್ಕು ಚೆಕ್ ಡ್ಯಾಂಗೆ ಅನುಮತಿ ನೀಡಿದ್ದಾರೆ.

1,150 ಕೋಟಿ ರೂ ವೆಚ್ಚದ ಯೋಜನೆ: ಶ್ರೀರಂಗಪಟ್ಟಣದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಬಸರಾಳು ಹೋಬಳಿಗೆ ನೀರು ಕಲ್ಪಿಸಲು ಅವಕಾಶವಿದೆ. ಅದೇ ರೀತಿ ಬಸರಾಳು ಹೋಬಳಿ ನೆರೆಯ ಅಂದರೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ದೇವಲಾಪುರ, ಹೊಣಕೆರೆ ಭಾಗಕ್ಕೂ ಕಾವೇರಿ ನೀರು ಪೂರೈಕೆ ಮಾಡಬಹುದು. ಈ ನಿಟ್ಟಿನಲ್ಲಿ 1,150 ಕೋಟಿ ರೂ ವೆಚ್ಚದ ಯೋಜನೆಗೆ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಗಣಿಗ ಮನವಿ ಸಲ್ಲಿಸಿದ್ದಾರೆ.

ಅಧಿವೇಶನದಲ್ಲೂ ಚರ್ಚೆ

ಕಳೆದ ಅಧಿವೇಶನದಲ್ಲಿಯೂ ಯೋಜನೆ ಕುರಿತು ರವಿಕುಮಾರ್ ಗಣಿಗ ಪ್ರಸ್ತಾಪಿಸಿದ್ದರು. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿಯೇ ಬರಪೀಡಿತ ಎನ್ನಿಸಿಕೊಂಡಿರುವ ಬಸರಾಳು ಹೋಬಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆನ್ನುವುದು ಹಲವು ದಶಕದ ಬೇಡಿಕೆಯಾಗಿದೆ. ಬಸರಾಳು ಹೋಬಳಿಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಬೇಕು. ಹೇಮಾವತಿ ನೀರಿನ ಬದಲು ಶ್ರೀರಂಗಪಟ್ಟಣದಿಂದಲೇ ಏತ ನೀರಾವರಿ ಮೂಲಕ ಬಸರಾಳು ಭಾಗಕ್ಕೆ ನೀರು ಹರಿಸಿಕೊಟ್ಟರೆ ದೊಡ್ಡ ಮಟ್ಟದ ಅನುಕೂಲವಾಗುತ್ತದೆ. ಜತೆಗೆ ನಮ್ಮ ಸರ್ಕಾರವನ್ನು ಸದಾ ನೆನೆಸಿಕೊಳ್ಳುತ್ತಾರೆ. ಜತೆಗೆ ಆರು ಚೆಕ್ ಡ್ಯಾಂಗಳ ಅವಶ್ಯಕತೆ ಇದೆ ಎಂದು ವಿವರಿಸಿದ್ದರು. ಇದರ ಮುಂದುವರೆದ ಭಾಗವಾಗಿ ಸಚಿವ ಎನ್.ಬೋಸರಾಜು ಅವರಿಗೆ ಮನವಿ ನೀಡಿದ್ದಾರೆ.

Mla Ravikumar Ganiga

ಬಸರಾಳು ಹೋಬಳಿಯ 40ಕ್ಕೂ ಹೆಚ್ಚು ಗ್ರಾಮಕ್ಕೆ ನೀರಾವರಿ ಸೌಲಭ್ಯವಿಲ್ಲ. 250 ಕಿ.ಮೀ ದೂರದಿಂದ ಹೇಮಾವತಿ ನೀರು ಹರಿದು ಬರುತ್ತದೆ. ಆದರೆ ಬಸರಾಳು ಭಾಗಕ್ಕೆ ಸಮರ್ಪಕವಾಗಿ ತಲುಪುವುದಿಲ್ಲ. ಆದ್ದರಿಂದ ಶ್ರೀರಂಗಪಟ್ಟಣದಿಂದ ಕಾವೇರಿ ನೀರೊದಗಿಸಲು ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಸಚಿವರು ಸ್ಪಂದನೆ ನೀಡಿದ್ದಾರೆ. ರವಿಕುಮಾರ್ ಗಣಿಗ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net