

ಮಂಡ್ಯ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರ ಹಂಚಿಕೆ ಮಾಡಿಕೊಳ್ಳಲಾಗಿದೆ. ಶಂಭೂಗೌಡ ಹಾಗೂ ನಾಗೇಶ್ ಬಣ ಒಂದಾಗಿ ಅವಿರೋಧ ಆಯ್ಕೆ ಮಾಡಿಕೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ನಾನು ಸರ್ಕಾರಿ ನೌಕರರೊಂದಿಗೆ ಚರ್ಚೆ ನಡೆಸಿದೆವು. ಸಂಘದ ರಾಜಕೀಯ ಪಕ್ಷಗಳಿಂದ ಹೊರಗುಳಿಯಬೇಕು. ಎಲ್ಲರೂ ಒಂದಾಗಿ ರಾಜಿ ಸಂಧಾನ ಮಾಡಿಕೊಳ್ಳಬೇಕೆಂದು ಮಾಡಿದ ಮನವಿಗೆ ಒಪ್ಪಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಸಂಘದ 66 ನಿರ್ದೇಶಕ ಸ್ಥಾನದ ಪೈಕಿ 5 ಸ್ಥಾನಕ್ಕೆ ಆರೋಗ್ಯಕರ ರೀತಿಯಲ್ಲಿ ಚುನಾವಣೆ ನಡೆಯುತ್ತಿದೆ. ಇದನ್ನು ಹೊರತು ಪಡಿಸಿ ಎಲ್ಲ ನಿರ್ದೇಶಕ ಸ್ಥಾನಗಳು ಅವಿರೋಧ ಆಯ್ಕೆಗೆ ಸಿದ್ದವಿದೆ. ನಿರ್ದೇಶಕರ ಚುನಾವಣೆಯ ನಂತರ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಮೊದಲ ಎರಡೂವರೆ ವರ್ಷ ನಾಗೇಶ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದು, ಉಳಿದ ಎರಡೂವರೆ ವರ್ಷಗಳು ಶಂಭೂಗೌಡ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಭವಿಷ್ಯದಲ್ಲಿ ಶಂಭೂಗೌಡರಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಹಾಲಿ ಜಿಲ್ಲಾಧ್ಯಕ್ಷ ಶಂಭೂಗೌಡ ಅವರು ಮಾತನಾಡಿ, ಶಾಸಕರು ಮತ್ತು ಸಚಿವರು ಸೌರ್ಹಾಧತೆಯ ಚುನಾವಣೆಗೆ ಒತ್ತುಕೊಟ್ಟು ಇತರರಿಗೆ ಮಾದರಿಯಾಗುವಂತೆ ತಿಳಿಸಿದ್ದರು. ನಾವೆಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದು 51 ಕ್ಷೇತ್ರಗಳನ್ನು ಅವಿರೋಧ ಆಯ್ಕೆ ಮಾಡಿಕೊಂಡಿದ್ದೇವೆ. ಇದು ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಇತಿಹಾಸದ ಪುಟದಲ್ಲಿ ದಾಖಲಿಸುವಂತಹ ಸಂಗತಿ ಎಂದರು.
ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಎಂಡಿಸಿಸಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಕಂಬದಹಳ್ಳಿ ಪುಟ್ಟಸ್ವಾಮಿ, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ್, ನಾಗೇಶ್ ಇದ್ದರು.