

ಮಂಡ್ಯ: ನಾನು ಆಂಜನೇಯನ ವಿರೋಧಿಯಲ್ಲ. ನಮ್ಮ ಮನೆಗೂ ಕೂಡ ಕೇಸರಿ ಧ್ವಜ ನೀಡಲಿ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶ್ರೀರಾಮ ಮತ್ತು ಆಂಜನೇಯಸ್ವಾಮಿಯ ದ್ವೇಷಿಯಲ್ಲ. ಕೆರಗೋಡು ಗ್ರಾಮದ ಜನರಿಗೆ ಶಾಂತಿ ಬೇಕಿದೆ. ಎಲ್ಲ ಪಕ್ಷದ ಮುಖಂಡರು, ಭಜರಂಗದಳ, ಆರ್‌ಎಸ್‌ಎಸ್ ಸೇರಿದಂತೆ ಯಾರ‌್ಯಾರು ಹೋರಾಟ ಮಾಡುತ್ತಿದ್ದೀರಾ, ಅವರಲ್ಲಿ ಕೇಳಿಕೊಳ್ಳುವುದೇನೆಂದರೆ ಜನರಿಗೆ ನಮ್ಮದಿ ಬೇಕಿದೆ. ಸುಮ್ಮನೆ ಬೆಂಕಿ ಹಚ್ಚುವುದು ಹಾಗೂ ಬಂದ್‌ಗೆ ಕರೆ ನೀಡುವುದು ಬೇಡ. ಯಾರೂ ಬಂದ್ ಮಾಡಬೇಡಿ, ಶಾಂತಿ ನೆಲಸಲಿ. ಈಗಾಗಲೇ ವ್ಯಾಪಾರಸ್ಥರು ನಷ್ಟದಲ್ಲಿದ್ದಾರೆ. ಅವರಿಗೆ ತೊಂದರೆ ಕೊಡುವುದು ಬೇಡವೆಂದು ಫೆ.7 ಮತ್ತು ಫೆ.9 ರಂದು ಬಂದ್‌ಗೆ ಕರೆ ನೀಡಿರುವವರಲ್ಲಿ ಮನವಿ ಮಾಡುತ್ತೇನೆ ಎಂದರು.
ಬೆಂಕಿ ಹಚ್ಚುವ ಕೆಲಸ ಮಾಡುವುದು ಬೇಡ. ಚುನಾವಣೆಗಾಗಿ ರಾಜಕೀಯ ಮಾಡಲ್ಲ. ಕಾಲಭೈರವ, ಶನಿಮಹಾತ್ಮ, ಆಂಜನೇಯ ಸ್ವಾಮಿಯನ್ನು ಪೂಜೆ ಮಾಡಿಯೇ ಬಂದು ಮಾತನಾಡುತ್ತಿದ್ದೇನೆ. ನಾನು ಯಾವ ದೇವರ ವಿರೋಧಿಯಲ್ಲಿ. ಹಲ್ಲೇಗೆರೆ ಗ್ರಾಮದಲ್ಲಿ ನಡೆಯುವ ಧ್ಯಾನ ಮಂದಿರ ಉದ್ಘಾಟನೆಗೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ದಲೈಲಾಮ ಬರುತ್ತಿದ್ದಾರೆ. ಕೆರಗೋಡು ವ್ಯಾಪ್ತಿಯಲ್ಲಿ ಭೂಮಿಗೆ ಚಿನ್ನದಂತ ಬೆಲೆ ಬರುತ್ತದೆ. ಬೇಡದೇ ಇರುವ ವಿಚಾರಕ್ಕೆ ತಲೆಹಾಕಿ, ಅಭಿವೃದ್ಧಿಗೆ ತೊಂದರೆ ಕೊಡುವುದು ಬೇಡ, ದಯವಿಟ್ಟು ಶಾಂತಿ ಸಭೆಯನ್ನು ಜಿಲ್ಲಾಡಳಿತ ಕರೆಯಬೇಕು. ಅದು ಕೆಲವು ದಿನಗಳಲ್ಲಿ ನಡೆಯಲಿದೆ ಎಂದು ಹೇಳಿದರು.