ಪ್ರತಿ ಮನೆಗೂ ಕಾವೇರಿ ನೀರು ಪೂರೈಕೆ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

MLA Ravikumar drives for JJM work Mandya
Published on

ಮಂಡ್ಯ: ತಾಲೂಕಿನ 175 ಗ್ರಾಮದ ಪ್ರತಿ ಮನೆಗೂ ಶುದ್ಧ ಕಾವೇರಿ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧೆಡೆ ಸೋಮವಾರ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹೊಸಬೂದನೂರು ಗ್ರಾಮದಲ್ಲಿ ಕೊಳಾಯಿ ಸಂಪರ್ಕ ಕಲ್ಪಿಸಿ ಮನೆ ಮನೆಗೆ ನೀರೊದಗಿಸುವ(ಜೆಜೆಎಂ)ಕಾಮಗಾರಿಗೆ ಭೂಮಿ ಪೂಜೆ ಮಾಡಿಲಾಗಿದೆ. ಅಂದಾಜು ಮೊತ್ತ 1.50 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಕ್ಷೇತ್ರ ವಾಪ್ತಿಯಲ್ಲಿನ ಪ್ರತಿ ಗ್ರಾಮಕ್ಕೆ ಶುದ್ದ ಕುಡಿಯುವ ನೀರು ಕೊಡಬೇಕಾಗಿದೆ. ಮಹಿಳೆಯರು ದೂರದಿಂದ ನೀರು ತರುವುದನ್ನು ತಪ್ಪಿಸಬೇಕಿದೆ. ಮನೆ ಬಾಗಿಲಿನಲ್ಲೇ ನೀರು ಹರಿಸಬೇಕೆನ್ನುವ ಉದ್ದೇಶದಿಂದ ಕಾವೇರಿ ನೀರು ಕೊಡುವ ಕಾರ್ಯ ಸಾಗುತ್ತಿದೆ ಎಂದು ತಿಳಿಸಿದರು.

ಕುಂಠಿತಗೊಂಡಿದ್ದ ಕಾಮಗಾರಿಗಳು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವೇಗ ಪಡೆದುಕೊಳ್ಳುತ್ತಿವೆ. ಕೆರೆಯಂಗಳದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ 1 ಎಕರೆ ನಿವೇಶನದಲ್ಲಿ ವಿಷನ್ ವಾತ್ಯಲ್ಯ ಯೋಜನೆಯಡಿ ಬಾಲಮಂದಿರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಸತಿ ಗೃಹ ನಿರ್ಮಿಸಲು ಅನುವಾಗುವಂತೆ ಖಾಲಿ ನಿವೇಶನಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿ 49.50 ಲಕ್ಷ ರೂಗಳಲ್ಲಿ ನಡೆಯುತ್ತಿದೆ. ಅಂತೆಯೇ ಹೊಸ ಬೋರ್‌ವೆಲ್ ನಿರ್ಮಾಣ ಪೈಪ್‌ಲೈನ್ ಹಾಗೂ ನೀರು ಸರಬರಾಜು ಕಾಮಗಾರಿಗೆ 9.16 ಲಕ್ಷ ರೂಗಳಲ್ಲಿ ಕೆಲಸ ನಡೆಯಲಿದೆ ಎಂದರು.

ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಹೊಸಬೂದನೂರು ಗ್ರಾ.ಪಂ ಅಧ್ಯಕ್ಷೆ ಮಾನಸಾ, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಕೆಂಪೇಗೌಡ, ಕುಮಾರ್, ಆರ್‌ಎಪಿಸಿಎಂಎಸ್ ಅಧ್ಯಕ್ಷ ಉಮ್ಮಡಹಳ್ಳಿ ಶೇಖರ್, ನಗರಸಭಾ ಸದಸ್ಯ ಜಾಕೀರ್‌ಪಾಷಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net