

ಮಂಡ್ಯ: ಹಳೇಬೂದನೂರು ಗ್ರಾಮವನ್ನು ಪ್ರವಾಸಿತಾಣವನ್ನಾಗಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಹಳೇಬೂದನೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜಲ ಜೀವನ್ ಮಿಷನ್(ಜೆಜೆಎಂ) ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಫೆಬ್ರವರಿಯಲ್ಲಿ ಎರಡು ದಿನ ಬೂದನೂರು ಉತ್ಸವ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ. ಉತ್ಸವ ಬಳಿಕ ಗ್ರಾಮ ಹೆಚ್ಚಿನ ಪ್ರಖ್ಯಾತಿ ಪಡೆದುಕೊಳ್ಳಲಿದೆ ಎಂದರು.
ಪ್ರತಿ ಮನೆಗೆ ಕಾವೇರಿ ನದಿ ನೀರು ಕುಡಿಯುವ ಯೋಜನೆಗೆ ಚಾಲನೆ ನೀಡಲಾಗಿದೆ. 2.16 ಕೋಟಿ ರೂ ವೆಚ್ಚದಲ್ಲಿ ಟ್ಯಾಂಕ್ ಮತ್ತು ಕೊಳಾಯಿ ಸಂಕರ್ಪ ಕಲ್ಪಿಸಲಾಗುವುದು. ಅಂತೆಯೇ ಹೊಸಬೂದನೂರು ಗ್ರಾಮಕ್ಕೆ 1.75 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಇನ್ನು ಗ್ರಾಮದ ಕೆರೆ ಅಭಿವೃದ್ದಿಗೆ 40 ಲಕ್ಷ ರೂ ಕ್ರಿಯಾಯೋಜನೆ ತಯಾರಾಗುತ್ತಿದೆ ಎಂದು ವಿವರಿಸಿದರು.
ಹಲವಾರು ಅಭಿವೃದ್ದಿ ಕಾಮಗಾರಿಗಳು ಕಾರ್ಯರೂಪದಲ್ಲಿವೆ. ಅದರಂತೆ ಗ್ರಾಮಕ್ಕೆ ಮತ್ತಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಹಂತ ಹಂತವಾಗಿ ಗ್ರಾಮಗಳ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುವುದು. ಅಂತೆಯೇ ಜಾಗ ಗುರುತಿಸಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದ ಅವರು, ನಮ್ಮ ಮನೆ ನಮ್ಮ ಹಕ್ಕು ಹೋರಾಟಗಾರರಿಗೆ ಮನೆಗಳ ಮಂಜೂರಾತಿಗೆ ಸಚಿವರು ಸಹಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಕ್ರಾಂತಿಗೆ ನಿವೇಶನ ಹಂಚಿಕೆ ಹಾಗೂ ಶಿವರಾತ್ರಿ ವೇಳೆಗೆ ಮನೆಗಳು ನಿರ್ಮಾಣವಾಗಲಿವೆ ಎಂದು ಭರವಸೆ ನೀಡಿದರು.
ಮೈಷುಗರ್ ಮಾಜಿ ಅಧ್ಯಕ್ಷ ಶಿವಾನಂದ್, ಗ್ರಾಮಸ್ಥರಾದ ಚಂದ್ರಶೇಖರ್, ರಾಜು, ಅರಕೇಶ್, ಚಿಕ್ಕಸಿದ್ದ, ರಾಜೇಂದ್ರ, ಸೌಭಾಗ್ಯ, ಸಿದ್ದೇಗೌಡ, ಸತೀಶ್ ಇತರರಿದ್ದರು.