ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ: ಗುತ್ತಿಗೆದಾರರು, ಅಧಿಕಾರಿಗಳಿಗೆ ಶಾಸಕ ರವಿಕುಮಾರ್ ಗಣಿಗ ಸೂಚನೆ

MLA Ravikumar drive for development work mandya
Published on

ಮಂಡ್ಯ: ಜನರಿಗಾಗಿ ಮಾಡುತ್ತಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದರ ಜತೆಗೆ ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಶಾಸಕ ರವಿಕುಮಾರ್ ಗಣಿಗ ಸೂಚನೆ ನೀಡಿದರು.

ತಾಲೂಕಿನ ವಿವಿಧ ಗ್ರಾಮದಲ್ಲಿ 2.15 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಂಡ್ಯ ವಿಧಾಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಗಳ ಮನೆ ಮನೆಗೂ ಕುಡಿಯಲು ಕಾವೇರಿ ನೀರು ಬರುವಂತೆ ಮಾಡಲಾಗುತ್ತಿದೆ. ಕೆರಗೋಡು ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಆಯೋಜಿಸಿದ್ದ ಜಲಜೀನವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್, ನೀರಿನ ಟ್ಯಾಂಕ್ ಮತ್ತು ಗ್ರಾಮದ 707 ಕುಟುಂಬಗಳ ಮನೆಗಳಿಗೆ ನಲ್ಲಿ ಸಂಪರ್ಕ ಕಾಮಗಾರಿಯು 1.70 ಕೋಟಿ ರೂ ವೆಚ್ಚದಲ್ಲಿ ನಡೆಯಲಿದೆ ಎಂದರು.

ತಂಡಸನಹಳ್ಳಿ ಗ್ರಾಮದಲ್ಲಿ 45 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, 900 ಮನೆಗಳಿಗೆ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಒದಗಿಸಲಾಗುವುದು. ನೀರಿನ ಟ್ಯಾಂಕ್ ನಿರ್ಮಾಣವು ನಡೆಯಲಿದೆ. ಒಟ್ಟು 17 ಕಿ.ಮೀ. ಪೈಪ್‌ಲೈನ್ ಅಳವಡಿಸಲಾಗುತ್ತದೆ. ಅಂತೆಯೇ ಪಣಕನಹಳ್ಳಿಯ ಶಾಲೆ ಅಭಿವೃದ್ಧಿಗೆ 1.20 ಲಕ್ಷ ರೂ ಮತ್ತು 4 ಲಕ್ಷ ರೂ ವೆಚ್ಚದಲ್ಲಿ ಅಂಬೇಡ್ಕರ್‌ಭವನ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಉಪ್ಪಾರಕನಹಳ್ಳಿಯಲ್ಲಿ 5 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಸಾಗಲಿವೆ. ನುಡಿದಂತೆ ಸರ್ಕಾರವು ಅಭಿವೃದ್ದಿಗಳನ್ನು ಕೈಗೊಂಡಿದೆ. ಸ್ಥಳೀಯ ನಿವಾಸಿಗಳು ಗ್ರಾಮ ಮತ್ತು ಜಮೀನುಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿಗಳು ಸಾಗಲಿವೆ ಎಂದು ಭರವಸೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಾಗರ್, ಇಂಜಿನಿಯರ್ ಬಿಂದು, ತಾ.ಪಂ ಮಾಜಿ ಸದಸ್ಯ ಪ್ರಶಾಂತ್‌ಬಾಬು, ಕೆರಗೋಡು ಗ್ರಾ.ಪಂ ಅಧ್ಯಕ್ಷ ನವೀನ್, ಸದಸ್ಯರಾದ ನಾಗರತ್ನ, ರಮೇಶ್, ಶ್ರೀಕಾಂತ್, ಸಾವಿತ್ರಿ, ರಾಧಾ, ಶಿವು, ಕಿಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net