

ಮಂಡ್ಯ: ಕಂದಾಯ ಪಾವತಿಸದ ಕಾರಣಕ್ಕೆ ಕೃಷಿ ಜಮೀನಿಗೆ ಸೇರಿದ ಪಹಣಿಯಲ್ಲಿ ಬೀಳು ಎಂದು ನಮೂದಾಗುತ್ತಿರುವುದರಿಂದ ರೈತರಿಗಾಗುತ್ತಿರುವ ಸಮಸ್ಯೆ ಬಗ್ಗೆ ಶಾಸಕ ರವಿಕುಮಾರ್ ಗಣಿಗ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದರಲ್ಲದೆ, ರೈತರಿಗೆ ಅನುಕೂಲವಾಗುವ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕೊಡಬೇಕೆಂದು ಒತ್ತಯಿಸಿದರು.
ಸಮಸ್ಯೆ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ರವಿಕುಮಾರ್, ಮಂಡ್ಯ ಜಿಲ್ಲೆಯಲ್ಲಿ ಹಲವು ದಶಕದಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿರುವವ ಪೈಕಿ ಕೆಲವರು ಕಂದಾಯ ಪಾವತಿಸಿಲ್ಲ. ಪರಿಣಾಮ ಅವರಿಗೆ ಸೇರಿದ ಜಮೀನಿನ ಪಹಣಿಯಲ್ಲಿ ಬೀಳು ಎಂದು ನಮೂದಾಗಿದೆ. ಇದರಿಂದಾಗಿ ರೈತರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಸರಿ ಮಾಡುವ ಕೆಲಸವಾಗಬೇಕಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಪಹಣಿಯಲ್ಲಿ ಬೀಳು ಎನ್ನುವುದನ್ನು ತೆಗೆದು ಮೂಲ ರೈತರ ಹೆಸರಿಗೆ ದಾಖಲೆ ಮಾಡುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಲು 2012 ರಿಂದ 2016ರವರೆಗೆ ಅವಕಾಶ ನೀಡಲಾಗಿತ್ತು. ಈ ರೀತಿ ಅರ್ಜಿ ಹಾಕಿದವರಿಗೆ ಮೂಲ ದಾಖಲೆ ಸರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಅರ್ಜಿ ಹಾಕದೇ ಇರುವುದರಿಂದ ಸಮಸ್ಯೆ ಎದುರಾಗಿರಬಹುದು. ವಾಸ್ತವವಾಗಿ ಪಹಣಿಯಲ್ಲಿ ಬೀಳು ಎಂದು ನಮೂದಾದ ನಂತರ ಹಲವರು ಸಾಗುವಳಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಬಳಿಕ ಭೂ ಮಾಲೀಕತ್ವ ಬದಲಾಗಿದೆ. ಇನ್ನೊಂದೆಡೆ ಸರ್ಕಾರ ಸಂಘ ಸಂಸ್ಥೆ, ಶಾಲೆ, ಸ್ಮಶಾನ, ಬಗರ್ ಹುಕುಂ ಸಾಗುವಳಿದಾರರಿಗೆ ಹಂಚಿಕೆ ಮಾಡಿದೆ. ಇದೊಂದು ಜಟಿಲ ಸಮಸ್ಯೆ. ಮಂಡ್ಯ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿರುವವರ ಪೈಕಿ 516 ಜನರ ದಾಖಲೆ ಸರಿಪಡಿಸಬೇಕಿದ್ದು, ಇದನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಅರ್ಜಿ ಸಲ್ಲಿಸಿಲ್ಲದಿದ್ದರೂ ನೈಜವಾಗಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರ ಸಂಖ್ಯೆ ಸಾಕಷ್ಟಿದೆ. ಇವರ ಹೆಸರಿಗೆ ದಾಖಲೆಯಾಗದ ಪರಿಣಾಮ ಸಾಲ ಪಡೆದುಕೊಳ್ಳಲು, ಮಾರಾಟ ಮಾಡಲು ತೊಂದರೆಯಾಗುತ್ತಿದೆ. ಆದ್ದರಿಂದ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಕೃಷ್ಣ ಭೈರೇಗೌಡ ಪ್ರತಿಕ್ರಿಯಿಸಿ, ಏಕಾಏಕಿ ಅರ್ಜಿ ಆಹ್ವಾನ ಮಾಡಲು ಸಾಧ್ಯವಾಗುವುದಿಲ್ಲ. ಕಾರಣ, ಸಾಗುವಳಿ ನಿಲ್ಲಿಸಿರುವವರು ಬಂದು ಅರ್ಜಿ ಸಲ್ಲಿಸುತ್ತಾರೆ. ಶಾಲೆ, ಸ್ಮಶಾನ ಜಾಗ ತಮ್ಮದೆಂದು ಅರ್ಜಿ ಹಾಕುತ್ತಾರೆ. ಆದ್ದರಿಂದ ಮೊದಲು ಪ್ರಕರಣದ ಬಗ್ಗೆ ಚರ್ಚೆ ನಡೆಸಬೇಕು. ಮತ್ತೊಮ್ಮೆ ಅರ್ಜಿ ಆಹ್ವಾನಿಸಲು ಸಾಧ್ಯವೇ ಎನ್ನುವುದನ್ನು ನೋಡಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.