

ಮಂಡ್ಯ: ನಾನು ಎರಡು ಸರಿ ಲಾಟರಿ ತೆಗೆದುಕೊಂಡಿದ್ದೆ. ಒಮ್ಮೆ ಬಂಪರ್ ಬಂತು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೂರು ಬಾರಿ ಲಾಟರಿ ತಗೊಂಡರೂ ಏಕೆ ಸರಿಯಾದ ನಂಬರ್ ಬರಲಿಲ್ಲ. ಆದ್ದರಿಂದ ಆ ಹುಡುಗನ ಬಗ್ಗೆ ಮಾತನಾಡುವುದು ವ್ಯರ್ಥ. ನಮಗೆ ಮಾಡುವುದಕ್ಕೆ ಸಾಕಷ್ಟು ಕೆಲಸವಿದೆ. ಆತನ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಉತ್ತರ ಕೊಡುತ್ತಿದ್ದಾರೆ ಎಂದು ಶಾಸಕ ರವಿಕುಮಾರ್ ಗಣಿಗ ತಿರುಗೇಟು ನೀಡಿದರು.
ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ 10 ಕೋಟಿ ರೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಂಡ್ಯ ಶಾಸಕರು ಚುನಾವಣೆಯಲ್ಲಿ ಗೆದ್ದಿದ್ದು ಲಾಟರಿ ರೀತಿ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಕೆಂಡಾಮಂಡಲರಾದರು. ಪ್ರವಾಸ ಮಾಡಲು ಬಂದಿದ್ದಾರೆ. ಸುಮ್ಮನೆ ಪ್ರವಾಸ ಮಾಡಿಕೊಂಡು ಹೋಗಬೇಕು. ಕುರುಕ್ಷೇತ್ರ ಸಿನಿಮಾದಲ್ಲಿ ನಿಖಿಲ್ ಪಾತ್ರ ಏನು?. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ 2 ಸಾವಿರ ಮತದಲ್ಲಿ ಗೆದ್ದಿದ್ದರು. ನಿಖಿಲ್ ದೊಡ್ಡಪ್ಪ ಎಚ್.ಡಿ.ರೇವಣ್ಣ 1,500 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಅಲ್ಲಿ ಹೋಗಿ ಹೇಳಲಿ ದೊಡ್ಡಪ್ಪ ಲಾಟರಿಯಿಂದ ಗೆದ್ದಿದ್ದೀರಿ ಎಂದು. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 62 ಸಾವಿರ ಮತವನ್ನು ಹಾಕಿದ ಜನರಿಗೆ ಅವಮಾನ ಮಾಡಿದ್ದಾರೆ. ಟೈಂಪಾಸ್ ಗಿರಾಕಿ ನೀನು. ಆತ ಏನು ಕೆಲಸ ಮಾಡಿದ್ದೀಯಾ ಹೇಳು. ಸುಮ್ಮನೆ ಕೂಗುವುದು, ಕಿರುಚುವುದು ಬೇಡ. ಮಂಡ್ಯವನ್ನ ನಿಮ್ಮ ಕುಟುಂಬಕ್ಕೆ ಗುತ್ತಿಗೆ ನೀಡಿಲ್ಲ. ಕೆಲಸ ಮಾಡುತ್ತಿರುವ ನಮ್ಮ ಬಗ್ಗೆ ಟೀಕೆ ಮಾಡುವುದು ಬಿಡಿ. ರೋಷಾವೇಷ ಕುರುಕ್ಷೇತ್ರ ಸಿನಿಮಾದಲ್ಲಿ ತೋರಿಸು ಎಂದರೆ ಇಲ್ಲಿ ಬಂದು ತೋರಿಸುತ್ತೀಯಾ. ನಿಖಿಲ್ ನನ್ನ ಸಹೋದರ ಇದ್ದಂತೆ. ಆದ್ದರಿಂದ ಟೀಕೆ ಬೇಡ ಅಷ್ಟೆ ಎಂದರು.
ಕಾಮಗಾರಿ ನೆಪವೊಡ್ಡಿ ನಾಲೆಗಳಿಗೆ ನೀರು ನಿಲ್ಲಿಸುವುದು ಸರಿಯಲ್ಲ. ತಕ್ಷಣವೇ ನಾಲೆಗಳಿಗೆ ನೀರು ಬಿಡಬೇಕು. ಹೈಪವರ್ ಮೀಟಿಂಗ್ ಮಾಡುತ್ತೇವೆ ಎಂದು ಹೇಳಿದ್ದಾರೆ. ನೀರಿಲ್ಲದೆ ರೈತರ ಬೆಳೆ ಒಣಗುತ್ತಿದೆ. ಕಾಮಗಾರಿ ನೆಪವೊಡ್ಡಿ ನೀರು ನಿಲ್ಲಿಸುವುದು ಸರಿಯಲ್ಲ. ಮಂತ್ರಿಗಳ ಜತೆ ಮಾತನಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ನಾಲೆಗೆ ನೀರು ಬಿಡುತ್ತಾರೆ. ಕೆಆರ್‌ಎಸ್‌ನಲ್ಲಿ ಶಿಲಾನ್ಯಾಸ ಮಾಡುವಂತೆ ಸಿಎಂ ಸೂಚನೆಯನ್ನು ಟೀಕಿಸಿದ ಮಾಜಿ ಶಾಸಕ ರವೀಂದ ಶ್ರೀಕಂಠಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಎಲ್ಲರಿಗೂ ಉತ್ತರ ಕೊಡುತ್ತಾ ಹೋದರೆ ಮನಸ್ಸಿಗೆ ತುಂಬ ಬೇಸರ ಉಂಟಾಗುತ್ತದೆ. ಆದ್ದರಿಂದ ಎಲ್ಲದಕ್ಕೂ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ನೀರು ಬಿಟ್ಟಮೇಲೆ ಅವರು ಮಾತನಾಡಿದ್ದೆಲ್ಲ ಮುಗಿಯುತ್ತದೆ ಬಿಡಿ ಎಂದು ಹೇಳಿದರು.
ನಿಖಿಲ್ ಹೇಳಿಕೆಗೆ ಕಾಂಗ್ರೆಸ್ ಖಂಡನೆ: ಶಾಸಕ ರವಿಕುಮಾರ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹಾಗೂ ರಾಮಚಂದ್ರು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನಾರ್ಹ. ಮಂಡ್ಯ ಕ್ಷೇತ್ರದ ಶಾಸಕರ ಬಗ್ಗೆ ಲಘುವಾಗಿ ಮಾತನಾಡಿ ಲಾಟರಿಯಲ್ಲಿ ಗೆದ್ದರು ಎಂಬ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ.ರುದ್ರಪ್ಪ ಹೇಳಿದರು.
ಎಚ್.ಡಿ.ದೇವೇಗೌಡರು 16 ಲೋಕಸಭಾ ಸ್ಥಾನ ಗೆದ್ದು ಪ್ರಧಾನಿಯಾದರು. ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಮಾಡಿಕೊಂಡು ಎರಡು ಬಾರಿ ಮುಖ್ಯಮಂತ್ರಿಯಾದರು. ಆದರೆ ರವಿಕುಮಾರ್ ಗಣಿಗ ಅವರು 2018ರಲ್ಲಿ ಸೋತರೂ ನಿರಂತರ ಜನ ಸೇವೆ ಮಾಡಿ 2023ರ ಚುನಾವಣೆಯಲ್ಲಿ ಕ್ಷೇತ್ರದ ಜನರ ಮತದಾನದ ಋಣದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
ತಂದೆ ಮುಖ್ಯಮಂತ್ರಿ, ತಾತ ಮಾಜಿ ಪ್ರಧಾನಿಗಳಾಗಿದ್ದರೂ ಜಿಲ್ಲೆಯಲ್ಲಿ ಕಣ್ಣೀರಿಟ್ಟು ಮತ ಕೇಳಿದರೂ ನಿಖಿಲ್ ಮಂಡ್ಯದಲ್ಲಿ ಗೆಲ್ಲಲಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಘಟಾನುಘಟಿಗಳ ಹಿನ್ನೆಲೆಯಿರುವ ನಿಮ್ಮ ಕುಟುಂಬದ ವಿರುದ್ದ ಸವಾಲೊಡ್ಡಿದ್ದರು. ಮಾತ್ರವಲ್ಲದೆ ಅವರ ವಿರುದ್ಧ ನೀವು ಸೋಲುವಂತಾಯಿತು ಎಂದು ವ್ಯಂಗ್ಯವಾಡಿದರು.
ಚುನಾವಣೆಯಲ್ಲಿ ಸೋತರೂ ಕೋವಿಡ್ ಸಂದರ್ಭದಲ್ಲಿ ಜನಸೇವೆ ಮಾಡಿದ್ದರು. ಅಂದು ರೈತರು ಬೆಳೆದಿದ್ದ ತರಕಾರಿ ಮಾರಾಟಕ್ಕೆ ಸಹಾಯ ಮಾಡಿದ್ದಲ್ಲದೆ, ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನೆರವು ನೀಡುವ ಮೂಲಕ ಜನಮನ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆಯೇ ಹೊರತು ನಿಮ್ಮಂತೆ ಅದೃಷ್ಟದಲ್ಲಿ ಗೆದ್ದವರಲ್ಲ ಎಂದು ಛೇಡಿಸಿದರು.
ಮುಡಾ ಅಧ್ಯಕ್ಷ ನಹೀಂ, ನಗರಸಭಾ ಸದಸ್ಯರಾದ ಶ್ರೀಧರ್, ಪೂರ್ಣಿಮಾ, ಸಿ.ಎಂ.ದ್ಯಾವಪ್ಪ, ಜಾಕಿರ್ ಪಾಷ, ಶಿವಪ್ರಕಾಶ್, ಮಾಜಿ ಸದಸ್ಯ ಅನಿಲ್‌ಕುಮಾರ್, ಮುಖಂಡ ಶಿವನಂಜು ಇದ್ದರು.