

ಮಂಡ್ಯ: ಕನ್ನಡದ ಬಗ್ಗೆ ಇಲ್ಲಸಲ್ಲದ ಮಾತನಾಡಿರುವ ನಟ ಕಮಲ್‌ಹಾಸನ್ ಕ್ಷಮೆಯಾಚಿಸುವುದನ್ನು ಬಿಟ್ಟು ಉದ್ಘಟತನ ತೋರುವುದು ಒಳ್ಳೆಯದಲ್ಲ. ಕನ್ನಡಿಗರ ಋಣದಲ್ಲಿ ತಮಿಳುನಾಡಿನವರು ಬದುಕುತ್ತಿದ್ದಾರೆ ಎನ್ನುವುದು ನೆನಪಿರಲಿ ಎಂದು ಶಾಸಕ ರವಿಕುಮಾರ್ ಗಣಿಗ ಎಚ್ಚರಿಕೆ ನೀಡಿದರು.
ಕಾವೇರಿ ನೀರು ನಮ್ಮದು. ನಮ್ಮಿಂದ ನೀರು ಕೊಡದಿದ್ದರೆ ತಮಿಳುನಾಡಿನವರಿಗೆ ಕುಡಿಯಲು ಹಾಗೂ ಬೆಳೆಗೆ ಏನು ಮಾಡುತ್ತಾರೆ. ಇದನ್ನು ಕಮಲ್ ಹಾಸನ್ ಅರಿತುಕೊಳ್ಳಲಿ. ನಮ್ಮ ಬಗ್ಗೆ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಯೇ ಶ್ರೇಷ್ಟ. ಕನ್ನಡ ಭಾಷೆಗಿಂತ ಯಾರೂ ದೊಡ್ಡವರಲ್ಲ. ಕನ್ನಡದ ಸಾರ್ವಭೌಮತೆ ಬಗ್ಗೆ ಲಘುವಾಗಿ ಮಾತನಾಡಿರುವ ನಟ ಕಮಲ್ ಹಾಸನ್ ಕ್ಷಮೆ ಕೇಳದೇ ಮೊಂಡುತನ ಪ್ರದರ್ಶಿಸುವುದು ಸರಿಯಲ್ಲ. ಈ ಬಗ್ಗೆ ತ.ನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಕಮಲ್ ಹಾಸನ್‌ಗೆ ಬುದ್ದಿ ಹೇಳಬೇಕು ಎಂದರು.
ಪ್ರಸ್ತುತ ತಮಿಳುನಾಡು ರಾಜ್ಯಕ್ಕೆ ಸೇರ್ಪಡೆಯಾಗಿರುವ ಹೊಸೂರು ಮತ್ತು ಊಟಿ ಪ್ರದೇಶಗಳು ಕರುನಾಡಿನ ಭಾಗವಾಗಿದ್ದವು. ಅಂದರೆ ಹಿಂದೆ ಮೈಸೂರು ಪ್ರಾಂತ್ಯಕ್ಕೆ ಸೇರಿತ್ತು. ಮೈಸೂರು ಯುದ್ದದಲ್ಲಿ ಆ ಪ್ರದೇಶಗಳು ತಮಿಳುನಾಡಿಗೆ ಸೇರ್ಪಡೆಯಾಗಿದೆ. ಆದ್ದರಿಂದ ನಮ್ಮ ರಾಜ್ಯಕ್ಕೆ ಹೊಸೂರು, ಊಟಿ ಪ್ರದೇಶವನ್ನು ಮರಳಿ ನೀಡಲು ಕಮಲ್ ಹಾಸನ್ ಪ್ರಯತ್ನಿಸಲಿ. ಅವರು ಕ್ಷಮೆಯಾಚನೆ ಮಾಡಬೇಕು. ಈಗಾಗಲೇ ಥಗ್‌ಲೈಪ್ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡುವುದಿಲ್ಲವೆಂದು ಚಿತ್ರಮಂಡಳಿ ಹೇಳಿದೆ ಎಂದರು.