ನಮ್ಮ ಅಭಿವೃದ್ಧಿ ಕೆಲಸಗಳನ್ನು ಎಚ್‌ಡಿಕೆ ಲೆಕ್ಕ ಹಾಕಲಿ: ಶಾಸಕ ರವಿಕುಮಾರ್ ಗಣಿಗ ಟಾಂಗ್

Mla Ravikumar Ganiga
Published on

ಮಂಡ್ಯ: ಮಂಡ್ಯದಲ್ಲಿ ಏನೆಲ್ಲ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎನ್ನುವುದನ್ನು ತೋರಿಸುತ್ತೇವೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವುಗಳನ್ನು ಲೆಕ್ಕ ಹಾಕಲಿ ಎಂದು ಶಾಸಕ ರವಿಕುಮಾರ್ ಗಣಿಗ ಟಾಂಗ್ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಈಗ ಥಿಂಕಿಂಗ್ ಸ್ವಾಮಿಯಾಗಿದ್ದಾರೆ. ನಾನು ಶಾಸಕನಾದ ಮೇಲೆ 2 ಸಾವಿರ ಉದ್ಯೋಗ ಸೃಷ್ಟಿಸಿದ್ದೇನೆ. ಅವರು ಥಿಂಕಿಂಗ್ ಮಾಡುತ್ತಲೇ ಇರಲಿ. ಕುಮಾರಸ್ವಾಮಿ ಅವರು ಬರಲಿ, ನಾವು ಏನೆಲ್ಲ ಅಭಿವೃದ್ಧಿ ಮಾಡಿದ್ದೇವೆ ಎನ್ನುವುದನ್ನು ತೋರಿಸುತ್ತೇವೆ. 2028ಕ್ಕೂ ನಮ್ಮದೇ, 2033ಕ್ಕೂ ನಮ್ಮದೇ ಸರ್ಕಾರ. ನಾವು ಜನಪರವಿದ್ದು, ನಮ್ಮ ಸರ್ಕಾರ ಸ್ಥಿರವಾಗಿರುತ್ತದೆ ಎಂದು ಎಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು.

ಕಾವೇರಿ ಆರತಿಗೆ ವಿರೋಧಿಸುತ್ತಿರುವ ಬಿಜೆಪಿಯವರಿಗೆ ಆ ತಾಯಿಯ ಶಾಪ ತಟ್ಟುತ್ತದೆ. ಒಂದು ಕಡೆ ಗಂಗಾರತಿಯನ್ನು ಒಪ್ಪಿಕೊಳ್ಳುವ ಬಿಜೆಪಿ, ಕಾವೇರಿ ಆರತಿಯನ್ನು ವಿರೋಧಿಸುತ್ತಿರುವುದು ಏಕೆ?. ಬಿಜೆಪಿಯವರಿಗೆ ಎರಡು ಮುಖನಾ?. ಒಂದು ಕಡೆ ಆಂಜನೇಯ ಎನ್ನುತ್ತಾರೆ, ಮತ್ತೊಂದು ಕಡೆ ಆರತಿಗೆ ವಿರೋಧಿಸುತ್ತಾರೆ. ಅವರು ನರಿ ಮುಖ, ಗೋಮುಖ ವ್ಯಾಘ್ರಮುಖ ಹೊಂದಿದ್ದಾರೆ. ಕಾವೇರಿ ತಾಯಿ ಮೂರು ರಾಜ್ಯದವರಿಗೆ ಊಟ ಕೊಡುತ್ತಾಳೆ. ಬಜರಂಗ ದಳದವರೇ ಕಾವೇರಿ ಆರತಿಯನ್ನು ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೆಆರ್‌ಎಸ್‌ನಲ್ಲಿ ಕಾವೇರಿ ನೀರು ಶೇಖರಣೆ ಆಗುತ್ತದೆ. ಅಲ್ಲಿ ಕಾವೇರಿ ಮಾತೆ ನೆಲೆಸಿದ್ದಾಳೆ. ಮಾತೆಗೆ ಆರತಿ ಮಾಡುವುದು ನಮ್ಮ ಹಿಂದು ಧರ್ಮ. ಇದಕ್ಕೆ ವಿರೋಧಿಸಿದರೆ ಕಾವೇರಿ ತಾಯಿಯ ಶಾಪ ತಟ್ಟುತ್ತದೆ ಎಂದರು.

ಕಾವೇರಿ ಅಂದರೆ ರಾಜಕೀಯ ಮಾಡುವ ಅಖಾಡನಾ?. ಮಂಗಳಾರತಿ ಮಾಡುವುದು ಹಿಂದು ಧರ್ಮದ ಪ್ರತೀಕ. ಕಾವೇರಿಯನ್ನು ಪೂಜೆ ಮಾಡುವುದು ತಪ್ಪು ಅಂದರೆ ಬಿಜೆಪಿಗೆ ಧಿಕ್ಕಾರ ಹೇಳುತ್ತೇನೆ. ನಾವು ಕಾವೇರಿ ಆರತಿ ಮಾಡುತ್ತೇವೆ ಎಂದಿದ್ದಕ್ಕೆ ಉತ್ತಮ ಮಳೆಯಾಗಿ ಜೂನ್ ತಿಂಗಳಲ್ಲೇ ಕೆಆರ್‌ಎಸ್ ಅಣೆಕಟ್ಟೆ ತುಂಬುತ್ತಿದೆ. ಕಾವೇರಿ ಆರತಿ ಮಾಡಿದರೆ ನಾವು ಇನ್ನೂ ಸುಭೀಕ್ಷವಾಗಿ ಇರುತ್ತೇವೆ ಎಂದು ಹೇಳಿದರು.

ನಗರದಲ್ಲಿ ಸ್ಲಂ ಬೋರ್ಡ್ ಮನೆಗಳಿಗೆ ಮುಸ್ಲಿಮರ ಲಗ್ಗೆ ಹಿಂದೆ ಶಾಸಕರ ಕೈವಾಡವಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಕ್ಕೆ ತಿರುಗೇಟು ನೀಡಿದ ಶಾಸಕರು, ಅಶೋಕ್ ಅವರು ತಮ್ಮ ಬುದ್ಧಿಯನ್ನು ಸೀಮಿತವಾಗಿ ಇಟ್ಟುಕೊಳ್ಳಲಿ. ತಾನು ಏನು ಎಂಬುದನ್ನ ಅವರು ಮೊದಲು ತಿಳಿದುಕೊಳ್ಳಲಿ. ಮುಸ್ಲಿಮರು ಪ್ಯಾಲೆಸ್ತೇನ್‌ನಲ್ಲಿ ಇಲ್ಲ, ಭಾರತದಲ್ಲೇ ಅವರು ಇರುವುದು ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದು ಹೇಳಿದರು.

ತಮಿಳು ಕಾಲನಿಯವರು ನಾವು ಪ್ರಸ್ತುತ ಇರುವ ಸ್ಥಳದಲ್ಲೇ ಇರುತ್ತೇವೆ, ಮನೆ ಬೇಡ ಎನ್ನುತ್ತಿದ್ದಾರೆ. ಕೋರ್ಟ್ ಆದೇಶ ನೀಡಿದರೆ ಎಲ್ಲ ಧರ್ಮದ ಅರ್ಹರಿಗೆ ಮನೆ ಹಂಚುತ್ತೇವೆ. ಬಿಜೆಪಿಯವರಿಗೆ ಮಬ್ಬು ಕವಿದಿದೆ. ಅವರಿಗೆ ಕಾಣುವುದೇ ಕ್ರಿಶ್ಚಿಯನ್ ಮತ್ತು ಮುಸ್ಲಿಮರು. ಯಾರೋ ಮನೆಗೆ ನುಗ್ಗಿದರೆ ಎಂಎಲ್‌ಎ ಕಾರಣ ಆಗುತ್ತಾರಾ?. ಮನೆ ಸಿಗುವ ಆಸೆಯಿಂದ ಅವರು ಅಲ್ಲಿಗೆ ಹೋಗಿರಬಹುದು. ಬಾಂಗ್ಲಾದೇಶದವರು ಇದ್ದರೆ ಕೇಂದ್ರ ಸರ್ಕಾರ ಪರಿಶೀಲನೆ ಮಾಡಲಿ. ಒಂದು ವೇಳೆ ವಲಸಿಗರು ಇದ್ದರೇ ಅವರನ್ನು ಈ ಕೂಡಲೇ ಬಂಧನ ಮಾಡಲಿ. ದೇಶದಿಂದ ಬಾಂಗ್ಲಾ ವಲಸಿಗರನ್ನ ಹೊರಹಾಕಲಿ. ನಮ್ಮ ರಾಜ್ಯ ಸರ್ಕಾರಕ್ಕೂ ತನಿಖೆಗೆ ಆಗ್ರಹಿಸುತ್ತೇನೆ. ಈ ವಿಚಾರದಲ್ಲಿ ಅಶೋಕ್ ಮೂರ್ಖತನದಲ್ಲಿ ಮಾತನಾಡುತ್ತಿದ್ದಾರೆ. ಒಂದು ಕಡೆ ಕಾವೇರಿ ಆರತಿಗೆ ವಿರೋಧ ಮಾಡುತ್ತಾರೆ, ಇನ್ನೊಂದು ಕಡೆ ಟಿಪ್ಪು ಸರ್ಕಾರ ಎನ್ನುತ್ತಾರೆ. ಅಶೋಕ್‌ಗೆ ಸ್ವಲ್ಪ ಆಫ್ ಮೆಂಟಲ್ ಇರಬೇಕು ಎಂದು ಛೇಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net