

ಮಂಡ್ಯ: ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸುವುದರ ಜತೆಗೆ 80 ಸಾವಿರ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಆದ್ದರಿಂದ ಸಾಧನೆ ಮಾಡುತ್ತಿರುವುದಕ್ಕೆ ಐದು ಲಕ್ಷ ಜನರನ್ನು ಸೇರಿಸಿ ಸಮಾವೇಶ ಮಾಡಲಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ಮದ್ದೂರು ತಾಲೂಕು ಗೆಜ್ಜಲಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಸಾಧನೆ ಸಮಾವೇಶದ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತವೆ. ಅವರ ಹೆಸರಲ್ಲೇ ವಿರೋಧ ಇದೆ. ಆದ್ದರಿಂದ ವಿರೋಧ ಮಾಡುವುದೇ ಅವರ ಕೆಲಸ. ರೈತರ ಅಭಿವೃದ್ಧಿ ಮಾಡುತ್ತಿದ್ದೇವೆ. ಆದರೆ ವಿಧಾನ ಪರಿಷತ್ ವಿಪಕ್ಷ ನಾಯಕ ಆರ್.ಅಶೋಕ್ ಟೀಕೆ ಮಾಡುವುದು ಭೂತದ ಬಾಯಲ್ಲಿ ಭಗವತ್ ಗೀತೆ ಬಂದಂತೆ. ರೈತರಿಗೆ ಬಿಜೆಪಿಯವರು ಗುಂಡು ಹೊಡೆದಿದ್ದಾರೆ. ಆದ್ದರಿಂದ ನಮ್ಮ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ನೈತಿಕತೆ ಇಲ್ಲ ಎಂದು ವ್ಯಂಗ್ಯವಾಡಿದರು.
ಕಾವೇರಿ ಆರತಿ, ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ವಿರೋಧಕ್ಕೆ ಪ್ರತಿಕ್ರಿಯಿಸಿ, ಯೋಜನೆಯಿಂದ ರೈತರ ಮಕ್ಕಳಿಗೆ ಉಪಯೋಗ ಇದೆ. ಕೆಲಸ ಕೊಡುವುದಕ್ಕೆ ಮಾಡುತ್ತಿದ್ದೇವೆ. ಅಂದಾಜು ಮೂರು ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಹೋರಾಟಕ್ಕೆ ಸೊಪ್ಪಾಕ್ಕಲ್ಲ. ಅಮ್ಯೂಸ್ಮೆಂಟ್ ಪಾರ್ಕ್, ಕಾವೇರಿ ಆರತಿ ಮಾಡುತ್ತೇವೆ. ವಿರೋಧ ಮಾಡುವರು ಸರ್ಕಾರದ ಜತೆ ಕುಳಿತು ಮಾತನಾಡಲಿ. ಯೋಜನೆಯಿಂದ ಡ್ಯಾಂ ಗೆ ಸಮಸ್ಯೆ ಏನು?. ಎಲ್ಲದಕ್ಕೂ ಪ್ರತಿಭಟನೆ ಮಾಡಿದರೆ ಏನು ಪ್ರಯೋಜನ?. ಒಂದು ಕಂಪನಿ ಬರುವುದು ಬೇಡ್ವಾ?. ಯಾರು ವಿರೋಧ ಮಾಡಿದರೂ ಅಮ್ಯೂಸ್ಮೆಂಟ್ ಪಾರ್ಕ್ ನಿಲ್ಲಲ್ಲ. ಇದರ ಜತೆಗೆ ನಾಲೆ ಅಭಿವೃದ್ಧಿ ಕೂಡ ಮಾಡಿದ್ದೇವೆ ಎಂದರು.
ಮನ್‌ಮುಲ್ ನಿರ್ದೇಶಕರಾದ ಯು.ಸಿ.ಶಿವಕುಮಾರ್, ಎನ್.ಅಪ್ಪಾಜಿಗೌಡ ಇತರರಿದ್ದರು.