ಮಹೇಶ್‌ಶೆಟ್ಟಿ ತಿಮರೋಡಿ ಬಿಜೆಪಿ ಅಸೋಸಿಯೇಟ್: ಶಾಸಕ ರವಿಕುಮಾರ್ ಗಣಿಗ ವಾಗ್ದಾಳಿ

Mla Ravikumar Ganiga
Published on

ಮಂಡ್ಯ: ಮಹೇಶ್‌ಶೆಟ್ಟಿ ತಿಮರೋಡಿ ಬೆಳೆಯುವುದಕ್ಕೆ ಬಿಜೆಪಿಗರೇ ಕಾರಣ. ಆತ ಬಿಜೆಪಿಯ ಅಸೋಸಿಯೇಟ್. ವೋಟ್‌ಗಾಗಿ ದೇವಸ್ಥಾನ, ಧರ್ಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕ ರವಿಕುಮಾರ್ ಗಣಿಗ ವಾಗ್ದಾಳಿ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಸಂಘದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿವೆ. ನಮ್ಮ ಸರ್ಕಾರ ಯಾರ ಪರವೂ ಅಲ್ಲ, ವಿರೋಧವೂ ಇಲ್ಲ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಹಾಗಾಗಿ ಧರ್ಮಸ್ಥಳ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ ಎಂದು ಹೇಳಿದರು.

ಮಂಜುನಾಥನ ಶಕ್ತಿ ಎಲ್ಲರಿಗೂ ತಿಳಿದಿದೆ. ಚಕ್ರವ್ಯೆಹ ಈಗ ಯಾವ ರೀತಿ ರಿವರ್ಸ್ ತಿರುಗಿಕೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ವಿರೋಧ ಪಕ್ಷದವರು ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರ ಸರ್ಕಾರ ಇದ್ದಾಗ ಸರಿಯಾದ ನ್ಯಾಯ ಕೊಡಿಸಿಲ್ಲ. ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಾರು ಕುತಂತ್ರ ಮಾಡುತ್ತಿದ್ದಾರೆ ಎಂಬುದನ್ನು ಎಸ್‌ಐಟಿ ತನಿಖೆ ಮೂಲಕ ನಮ್ಮ ಸರ್ಕಾರ ತೋರಿಸುತ್ತಿದೆ. ಕೆಲವರನ್ನು ಗಡಿಪಾರು ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಅವರ ಪರ, ಇವರ ಪರ ಎಂದು ಸುಳ್ಳು ಅಪಪ್ರಚಾರ ಮಾಡಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಟೀಕಿಸಿದ ಶಾಸಕ, ಧರ್ಮಸ್ಥಳ ಚಲೋ ಎಂಬ ಡ್ರಾಮಾ ಕ್ರಿಯೇಟ್ ಮಾಡುತ್ತಾರೆ. ಇದರಿಂದ ಧರ್ಮಸ್ಥಳ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ ತನಿಖೆ ಮಾಡಿದರಷ್ಟೇ ಸತ್ಯ ಹೊರಗೆ ಬರಲಿದೆ ಎಂದು ಹೇಳಿದರು.

ರಾಜಕೀಯಕ್ಕಾಗಿ ಸುಮ್ಮನೆ ಜೈಕಾರ ಹಾಕುವುದಿಲ್ಲ. ಯಾರ‌್ಯಾರು ಪಿತೂರಿ ಮಾಡಿದ್ದರೋ ಅವರೆಲ್ಲರನ್ನೂ ಗಡಿಪಾರು ಮಾಡಲಾಗಿದೆ. ಸೌಜನ್ಯಗೂ ನ್ಯಾಯ ಸಿಗುತ್ತದೆ. ಅದೇ ರೀತಿ ಧರ್ಮಸ್ಥಳಕ್ಕೂ ನ್ಯಾಯ ಸಿಗಲಿದೆ. ನಾವು ಎಲ್ಲರ ಪರ ಇದ್ದೇವೆ. ಬಡವರು, ಹೆಣ್ಣು ಮಕ್ಕಳ ಪರ ಇದ್ದೇವೆ. ವೋಟ್‌ಗಾಗಿ ದೇವಸ್ಥಾನ, ಧರ್ಮವನ್ನು ದುರುಪಯೋಗ ಮಾಡಿಕೊಳ್ಳುತ್ತಿಲ್ಲ. ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net