ಬಿಜೆಪಿ ನಾಯಕರಿಗೆ ‘ಡ್ರಾಮಾ’ವೇ ಬಂಡವಾಳ: ಶಾಸಕ ರವಿಕುಮಾರ್ ಗಣಿಗ ವ್ಯಂಗ್ಯ

Mla Ravikumar Ganiga
Published on

ಮಂಡ್ಯ: ಬಿಜೆಪಿಯವರಿಗೆ ನಾಟಕವೇ ಬಂಡವಾಳ. ದೇವಸ್ಥಾನ ತೋರಿಸುವುದು ಮತ ಕೇಳುವುದು. ಇಂತಹ ನಾಟಕ ಮಾಡಿಯೇ ಚುನಾವಣೆಯಲ್ಲಿ ಸೋಲುವುದು. ಅಣ್ಣಪ್ಪನ ಶಾಪ ಬಿಜೆಪಿಯವರಿಗೆ ತಟ್ಟುತ್ತದೆ ಎಂದು ಶಾಸಕ ರವಿಕುಮಾರ್ ಗಣಿಗ ವಾಗ್ದಾಳಿ ನಡೆಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೋರಾಟದ ವಿಚಾರಕ್ಕೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಎಲ್ಲರಿಗೂ ಸೇರಿದ್ದು. ಕಾಂಗ್ರೆಸ್‌ನವರು ಕೂಡ ಧರ್ಮಸ್ಥಳ ಯಾತ್ರೆಗೆ ಹೋಗಿದ್ದೇವೆ. 2023 ರವರೆಗೆ ಬಿಜೆಪಿ ಸರ್ಕಾರ ಇತ್ತು. ಸೌಜನ್ಯ ಸಾವು ಬಿಜೆಪಿ ಪ್ರಕರಣ ಬಿಜೆಪಿ ಆಡಳಿತಾವಧಿಯಲ್ಲೇ ಇತ್ತು. ಆರ್.ಅಶೋಕ್ ಗೃಹ ಸಚಿವರು. ಆಗ ಹಾರಾರ್ ಸಿನಿಮಾ ರೀತಿ ವ್ಯವಸ್ಥೆ ಇತ್ತು. ನಮಗೂ ರಾಜಕಾರಣ ಮಾಡುವುದಕ್ಕೆ ಬರುತ್ತದೆ. ಆದ್ದರಿಂದ ಬಿಜೆಪಿ ಇಂತಹ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದರು.

ಸೌಜನ್ಯ ಸತ್ತಿದ್ದಾರೆ, ಅದರ ತನಿಖೆ ಮಾಡಬೇಕಲ್ಲ?. ತನಿಖೆ ಮಾಡಿ ಎಂದು ಬಿಜೆಪಿಯವರೇ ಹೇಳಿದ್ದರು. ಡಾ.ವೀರೇಂದ್ರ ಹೆಗ್ಡೆ ಕುಟುಂಬದವರೇ ಅವರೇ ಸಿಎಂಗೆ ಧನ್ಯವಾದ ತಿಳಿಸಿದ್ದಾರೆ. ಬಿಜೆಪಿಯವರು ಎಸ್‌ಐಟಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ತಲೆ ಬುರುಡೆ ಹಿಡ್ಕೊಂಡು ಬಂದ ಮೇಲೆ ತನಿಖೆ ಮಾಡಲೇ ಬೇಕು. ಈ ಹಿನ್ನೆಲೆಯಲ್ಲಿ ಅನಾಮಿಕನ ತನಿಖೆ ನಡೆಯುತ್ತಿದೆ. ಕಾನೂನು ಪಾರದರ್ಶಕವಾಗಿದೆ. ಲಕ್ಷಾಂತರ ಜನರನ್ನ ಕರೆದುಕೊಂಡು ಹೋಗಿ ಧರ್ಮಸ್ಥಳದಲ್ಲಿ ಡ್ರಾಮಾ ಮಾಡುವುದು ನಮಗೂ ಗೊತ್ತಿದೆ. ಜೈ ಜೈ ಎನ್ನುವುದಲ್ಲ, ಸತ್ತಿರುವವರಿಗೆ ನ್ಯಾಯ ಕೊಡಿಸಬೇಕು. ಧರ್ಮಸ್ಥಳದವರು ಮಾಡಿದ್ದಾರಾ?, ಉತ್ತರ ಬೇಕಲ್ಲ?. ಸೌಜನ್ಯ ರೇಪ್ ಆಗಿ ಸತ್ತಿರುವುದಲ್ಲವೇ. ಈ ಪ್ರಕರಣವನ್ನು ಏಕೆ ಮಂಜುನಾಥನಿಗೆ ಹೋಲಿಸುತ್ತಿದ್ದಾರೆ?. ಅಣ್ಣಪ್ಪನ ಶಾಪ ಬಿಜೆಪಿಯವರಿಗೆ ತಟ್ಟುತ್ತದೆ ಎಂದರು.

ಸತ್ತಿರುವ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಲು ಎಸ್‌ಐಟಿ ರಚನೆ ಆಗಿದೆ. ಮಾಸ್ಕ್ ಮ್ಯಾನ್ ತನಿಖೆ ಮಾಡಲಾಗುತ್ತಿದೆ. ಈಗ ನಾವು ಡ್ರಾಮಾ ಮಾಡಬೇಕಾ?. ಧರ್ಮಸ್ಥಳ ಯಾತ್ರೆ ಮಾಡುತ್ತೇವೆಂದು ಸುಳ್ಳು ಹೇಳಬೇಕಾ?. ಇದನ್ನು ಮಂಜುನಾಥಸ್ವಾಮಿ ಒಪ್ಪಲ್ಲ. ಬಿಜೆಪಿ ಈ ರೀತಿ ಡ್ರಾಮಾ ಮಾಡಿ ಚುನಾವಣೆಯಲ್ಲಿ ಸೋಲುತ್ತದೆ. ದೇವರ ಭಕ್ತಿ ಇದ್ದಿದ್ದರೆ 25 ವರ್ಷ ಅಧಿಕಾರದಲ್ಲಿರಬೇಕಿತ್ತು. ಎಸ್‌ಐಟಿ ತನಿಖೆ ನಿಲ್ಲಿಸಿದರೆ ಮತ್ತೆ ಹೋರಾಟ ಮಾಡುತ್ತಾರೆ. ಬಿಜೆಪಿಯವರು ರಾಜಕಾರಣ ಮಾಡುತ್ತಾರೆ ಅಷ್ಟೆ. ಎಸ್‌ಐಟಿ ತನಿಖೆ ನಡೆಯುತ್ತಿದೆ, ರಾಜಕೀಯ ಬಿಟ್ಟು ಮಾತನಾಡಲಿ. ಧರ್ಮಸ್ಥಳದ ಬಗ್ಗೆ ಯಾವ ಪಕ್ಷವೂ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಚುನಾವಣೆಗೆ ಮಂಚೆ ಧರ್ಮಸ್ಥಳಕ್ಕೆ ಜನರನ್ನ ಕರೆದುಕೊಂಡು ಹೋಗಿದ್ದೆ. ಬಿಜೆಪಿಯವರಿಗೆ ನಾಟಕವೇ ಬಂಡವಾಳ. ದೇವಸ್ಥಾನ ತೋರಿಸುವುದು ಮತ ಕೇಳುವುದು. ದೇವರ ಶಾಪದಿಂದ ನೀವು ಸೋಲೋದು. 2023 ರವರೆಗೆ ಅವರದೇ ಸರ್ಕಾರ ಇತ್ತು. ತನಿಖೆ ಮಾಡಲು ಎನ್‌ಐಎಗೆ ಏಕೆ ಅಮೆರಿಕಾ ಏಜೆನ್ಸಿಗೆ ಕೊಡಬಹುದಿತ್ತು. ಮಾಸ್ಕ್ ಮ್ಯಾನ್ ಎಸ್‌ಐಟಿ ವಶದಲ್ಲಿದ್ದಾನೆ. ಮಹೇಶ್ ಶೆಟ್ಟಿ ಮನೆ ಮೇಲೆ ದಾಳಿ ಆಗಿದೆ. ಸಮೀರ್ ತನಿಖೆ ಆಗುತ್ತಿದೆ. ಕಾನೂನು ಎಲ್ಲರಿಗೂ ಒಂದೇ. ಮಂಜುನಾಥ ಸ್ವಾಮಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದೇನೆಂದು ಬಿಜೆಪಿ ಬಹಿರಂಗವಾಗಿ ಹೇಳಲಿ. ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಬಿಜೆಪಿಯವರು ಸುಮ್ಮನೆ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸದನದಲ್ಲಿ ಡಿಸಿಎಂ ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್ ಗಣಿಗ, ಕೆಲವರ ಮಾತು ಒಪ್ಪುತ್ತದೆ, ಕೆಲವರ ಮಾತು ಒಪ್ಪಲ್ಲ. ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿರುವುದುದು ಅವರ ವೈಯಕ್ತಿಕ. ಒಪ್ಪದೇ ಅದನ್ನ ಟೀಕೆ ಮಾಡುವುದು ಅವರವರ ವೈಯಕ್ತಿಕ. ಅವರವರ ಭಾವನೆ ವ್ಯಕ್ತಪಡಿಸುವ ಸ್ವತಂತ್ರ ಇದೆ. ಟೀಕೆ ಮಾಡುತ್ತಿದ್ದಾರೆಂದು ಅದನ್ನು ನಾವು ಕೇಳಲ್ಲ. ಆರ್‌ಎಸ್‌ಎಸ್ ಗೀತೆ ಮೇಲೆ ಗೌರವ ಇದೆ ಎಂದಿದ್ದಾರೆಯೇ ಹೊರತು ಅದರ ಸಿದ್ಧಾಂತವನ್ನು ಒಪ್ಪುತ್ತೇವೆ ಎಂದಿಲ್ಲ. ಸಣ್ಣ ವಯಸ್ಸಿನ ಇದ್ದಾಗ ಹೋಗುತ್ತಿದ್ದೆ ಎಂದು ಹೇಳಿದ್ದಾರೆ, ತಪ್ಪೇನಿದೆ?. ವಿಧಾನಸಭೆ ಒಳಗೆ ಉಪ ಮುಖ್ಯಮಂತ್ರಿಯಾಗಿ ಹೇಳಿದ್ದಾರೆ ಅಷ್ಟೆ. ಡಿಕೆ ಅವರು ಗೀತೆ ಹಾಡಿರುವುದು ಅವರ ವಾಕ್ ಸ್ವಾತಂತ್ರ್ಯ. ವಿರೋಧ ಮಾಡುವವರು ಮಾಡಲಿ. ಪಕ್ಷದಲ್ಲಿ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದರು.

ದಸರಾ ಉದ್ಘಾಟನೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಗೆ ಬಿಜೆಪಿ ವಿರೋಧ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲದಕ್ಕೂ ವಿರೋಧ ಮಾಡುತ್ತಾರೆ ಬಿಡಿ. ವಿರೋಧ ಮಾಡುವವರು ಟೈಮ್ ವೇಸ್ಟ್ ಗಿರಾಕಿಗಳು. ಅಬ್ದುಲ್ ಕಲಾಂ ಈ ದೇಶದ ರಾಷ್ಟ್ರಪತಿ ಆಗಬಹುದು. ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಬಹುದು. 90 ಕೋಟಿ ಮಹಿಳೆಯರ ಪರವಾಗಿರುವ ಮಹಿಳೆಯನ್ನು ವಿರೋಧ ಮಾಡುತ್ತಾರೆ ಎಂದರೆ ಮಹಿಳೆಯರಿಗೆ ಬಿಜೆಪಿಯವರು ಅಪಮಾನ ಮಾಡಿದಂತೆ. ಅವರ ವಿಚಾರ ದೇವಸ್ಥಾನ, ಮುಸ್ಲಿಂ, ಪಾಕಿಸ್ತಾನ, ಅಮೆರಿಕಾ ಅಷ್ಟೆ. ಟ್ಯಾಕ್ಸ್ ಬಗ್ಗೆ ಟ್ರಂಪ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶ್ನೆ ಮಾಡಲಿ. ಬಿಜೆಪಿಯವರನ್ನು ಚಾಮುಂಡೇಶ್ವರಿ ಸಹ ಒಪ್ಪಲ್ಲ. ಭಾರತ ಸರ್ವಧರ್ಮದ ನೆಲೆ. ಮತಕ್ಕಾಗಿ ಮಾತನಾಡುತ್ತೇವೆಂದು ಬಿಜೆಪಿ ಹೇಳಿಲಿ. ನಾವು ಸರ್ವ ಧರ್ಮಗಳ ಪರ ಇದ್ದೇವೆ. ಬಾನು ಮುಷ್ತಾಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net