

ಮಂಡ್ಯ: ಶತ್ರು ರಾಷ್ಟ್ರದ ಪರ ಯಾರೇ ಘೋಷಣೆ ಕೂಗಿದರು ಅದು ದೇಶದ್ರೋಹ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಬೂದನೂರು ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಮೊದಲು ದೇಶ. ಅದು ಯಾರೇ ಮಾಡಿದ್ದರೂ ತಪ್ಪು. ಆದ್ದರಿಂದ ತನಿಖೆ ಮಾಡಲಿ. ಅದರಂತೆ 2022ರಲ್ಲಿ ಮಂಡ್ಯ ನಗರದಲ್ಲಿ ನಡೆದಿದ್ದ ಬಿಜೆಪಿ ಪ್ರತಿಭಟನೆ ಸಮಯದಲ್ಲಿ ಆ ಪಕ್ಷದ ಕಾರ್ಯಕರ್ತ ಪಾಕ್ ಪರ ಘೋಷಣೆ ಕೂಗಿದ್ದಾನೆ. ಆ ಸಮಯದಲ್ಲಿ ಆತನ ಬಾಯಿ ಮುಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಿ. ಮಾಧ್ಯಮದವರೊಂದಿಗೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ನಡವಳಿಕೆ ತಪ್ಪು. ಪತ್ರಕರ್ತರಿಗೆ ಅಗೌರವ ತಂದಿದ್ದು ಸರಿಯಲ್ಲ. ನಾನು ಪತ್ರಕರ್ತನಾಗಿ ನಾಸೀರ್ ಹುಸೇನ್ ಅವರಿಗೆ ಹೇಳುತ್ತೇನೆ ಎಂದರು.
ರಾಜ್ಯಸರ್ಕಾರಕ್ಕೆ ಜಯಪ್ರಕಾಶ್ ಹೆಗ್ಡೆ ಅವರಿಂದ ಜಾತಿ ಸಮೀಕ್ಷಾ ವರದಿ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುಂಚಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಶಾಸಕರೆಲ್ಲ ಸಭೆ ಮಾಡಲಾಗಿದೆ. ಬಳಿಕ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಕೂಡ ಮೊದಲು ವರದಿ ಕೊಡಲಿ ಎಂದಿದೆ. ನಾವು ಅದನ್ನ ಜಾರಿಗೆ ತರಬೇಕು ಅಂತೇನಿಲ್ಲ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಮೇಲೆ ನಮಗೆ ನಂಬಿಕೆ ಇದೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ವರದಿಗೆ ಯಾರು ವಿರೋಧ ಮಾಡಿಲ್ಲ. ಬದಲಿಗೆ ಯಾರಿಗೂ ಅನ್ಯಾಯವಾಗದಂತೆ ನಾವು ಮನವಿ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.