ಅಭಿವೃದ್ಧಿ ಮಾಡದಿದ್ದರೆ ಎಚ್‌ಡಿಕೆ ರಾಜೀನಾಮೆ ಕೊಡಲಿ: ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಒತ್ತಾಯ

Mla Ravikumar Ganiga
Published on

ಮಂಡ್ಯ: ಕೇಂದ್ರ ಸರ್ಕಾರದಿಂದ ಆಂಧ್ರಪ್ರದೇಶಕ್ಕೆ ಸಿಗುತ್ತಿರುವ ಮನ್ನಣೆ ಕರ್ನಾಟಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾಗಿ ಅಭಿವೃದ್ಧಿ ಮಾಡಲಾಗದಿದ್ದರೇ ರಾಜೀನಾಮೆ ಕೊಟ್ಟು ಹೊರಬನ್ನಿ ಎಂದು ಶಾಸಕ ರವಿಕುಮಾರ್ ಗಣಿಗ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರದಿಂದ ಭರಪೂರ ಸಹಕಾರ ನೀಡಲಾಗುತ್ತಿದೆ. ಆದರೆ ಕರ್ನಾಟಕವನ್ನು ಕಡೆಗಣಿಸಲಾಗುತ್ತಿದೆ. ಆದ್ದರಿಂದ ಕೇಂದ್ರ ಸಚಿವರು ಹಳೆಯ ಕ್ಯಾಸೆಟ್ ಹಾಕಿದರೆ ಯಾರು ಕೇಳಲ್ಲ. ಆಂಧ್ರದಲ್ಲಿ 19 ಜನ ಸಂಸದರು ಆಯ್ಕೆಯಾಗಿದ್ದಾರೆ. ಆದ್ದರಿಂದ ಅವರು ಅನಿವಾರ್ಯವೆಂದು ಕುಮಾರಸ್ವಾಮಿ ಹೇಳುತ್ತಾರೆ. ಬಹುಶಃ ಆ ಮಾತನ್ನು ಕೇಳಿದರೆ ಬಿಜೆಪಿಯಲ್ಲಿ ಎಚ್‌ಡಿಕೆ ಅವರಿಗೆ ಉಸಿರುಗಟ್ಟಿದ ವಾತಾವರಣವಿರಬಹುದು. ಆ ಕಾರಣಕ್ಕೆ ಕೇಂದ್ರದ ವಿರುದ್ಧ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಕುಮಾರಣ್ಣ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಎನ್‌ಡಿಎಯಿಂದ ಹೊರಗಡೆ ಬರುವುದು ಒಳ್ಳೆಯದು ಎಂದರು.

ರಾಜ್ಯದಿಂದ 19 ಜನ ಗೆದ್ದಿದ್ದಾರೆ, ಆದರೆ ಎಲ್ಲರು ಬಾಯಿ ಬೀಗ ಹಾಕೊಂಡಿದ್ದಾರೆ. ಕರ್ನಾಟಕಕ್ಕಿಂತ ಆಂಧ್ರಕ್ಕೆ ಹೆಚ್ಚು ಮನ್ನಣೆ ಸಿಗುತ್ತಿದೆ ಎಂದರೆ ಏನರ್ಥ. ಕಾವೇರಿ ನೀರಿನ ವಿಚಾರಕ್ಕೆ ಅಂಬರೀಷ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಿಲುವನ್ನು ಇಂದು ಎಚ್.ಡಿ.ಕುಮಾರಸ್ವಾಮಿ ತೆಗೆದುಕೊಳ್ಳಲಿ. ಆಗ ಇಡೀ ರಾಜ್ಯ ಕುಮಾರಣ್ಣ ಪರ ನಿಂತು ಬೆಂಬಲ ಕೊಡುತ್ತದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರುದ್ರಪ್ಪ ಇದ್ದರು.

100 ಎಕರೆ ಜಾಗ ಕೊಡಲು ನಾನು ಸಿದ್ಧ

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ ಇನ್ನು ಕೆಲಸ, ಕೈಗಾರಿಕೆ ತರಕ್ಕಾಗಲ್ಲ ಎಂದರೆ ಏನು ಅರ್ಥ?. ಆದ್ದರಿಂದ ಕುಮಾರಸ್ವಾಮಿ ಕೇಂದ್ರ ಸರ್ಕಾರದ ಜತೆ ಇರುವುದು ವ್ಯರ್ಥ ಎಂದು ಶಾಸಕ ರವಿಕುಮಾರ್ ಗಣಿಗ ಟೀಕಿಸಿದರು.

ನನ್ನ ತಾಲೂಕಿನಲ್ಲಿ 100 ಎಕರೆ ಜಾಗ ಕೊಡುವುದಕ್ಕೆ ನಾನು ರೆಡಿ. ಮಂಡ್ಯ ನಗರದ ಪಕ್ಕದಲ್ಲೇ 100 ಎಕರೆ ಹಾಗೂ ಬಸರಾಳು ಹೋಬಳಿಯಲ್ಲಿ 100 ಎಕರೆ ಕೊಡಿಸುತ್ತೇನೆ. ಕೇಂದ್ರ ಸಚಿವರ ಜತೆ ಕೈ ಜೋಡಿಸುತ್ತೇನೆ, ಮೊದಲು ಅಭಿವೃದ್ಧಿ ಮಾಡೋಣ.ರಾಜಕಾರಣ ಅಮೇಲೆ ಮಾಡೋಣ. ಇನ್ನೂ ಮೂರುವರೆ ವರ್ಷ ಇದೆ, ಮುಂದೆ ತರುತ್ತಾರಾ ನೋಡೋಣಾ?. ಮಂಡ್ಯ ಯುವಕರಿಗೆ ಕೆಲಸ ಬೇಕು. ಕೇಂದ್ರ ಮಂತ್ರಿ, ಪ್ರಭಾವಿ ಮಂತ್ರಿ, ಪ್ರಧಾನಿ ಜತೆ ಅವರ ತಂದೆಗೆ ಬಹಳ ಆತ್ಮೀಯ ಬಾಂಧವ್ಯ ಇದೆ. ಕುಮಾರಣ್ಣ ಎಂದರೆ ಆತ್ಮೀಯ ಬಾಂಧವ್ಯ ಇದೆ, ಅವರ ಕೈನಲ್ಲೆ ಆಗುತ್ತಿಲ್ಲ?. ಕುಮಾರಣ್ಣ ಅವರ ಭೇಟಿ ಮಾಡಿ ಪತ್ರ ಕೊಡಲು ರೆಡಿ. ರಾಜಕಾರಣದಲ್ಲಿ ಹಣೆ ಬರಹ, ಅಭಿವೃದ್ಧಿ ಮಾಡಿದವರೆಲ್ಲ ಗೆದ್ದಿಲ್ಲ. ಅವತ್ತಿನ ದಿನ ಗೆಲ್ಲಬಹುದು ಎಂದರು.

ಕೈಗಾರಿಕೆ ತಂದರೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೆಸರು ಬರುತ್ತದೆ ಎಂದು ಅಡ್ಡ ಹಾಕಲ್ಲ. ಮಂಡ್ಯದಲ್ಲಿ ಜಾಗ ಕೊಡಲು ನಾವು ಸಿದ್ಧ, ಕೈಗಾರಿಕೆ ಅನುಷ್ಠಾನ ಮಾಡುವುದಕ್ಕೆ ಅವರು ಸಿದ್ಧ ಇರಬೇಕು. ಆದರೆ ಕುಮಾರಸ್ವಾಮಿ ಭಾಷಣ ಕೇಳಿದರೆ, ಅವರು ಹೇಳಿದ ಕೆಲಸ ಆಗುತ್ತಿಲ್ಲ. ಆದ್ದರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎದುರು ಮಾತನಾಡಲು ಎಚ್‌ಡಿಕೆಗೆ ಬಾಯಿ ಇಲ್ಲ. ಕೇಂದ್ರ ಸಚಿವರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಮುಂದೆ ಮಾತನಾಡಲ್ಲ. ಬರೀ ಬಾಣ ಬಿಡುವುದಷ್ಟೆ, ತೇಜಸ್ವಿ ಸೂರ್ಯ ಹೇಗೆ ಬಾಣ ಬಿಡುತ್ತಾರೆ ನೋಡಿ. ಇಲ್ಲಿ ಬಂದು ಬಾಣ ಬಿಡುವುದಲ್ಲ, ಕೇಂದ್ರ ಸರ್ಕಾರಕ್ಕೆ ಬಿಡಿ ಕುಮಾರಣ್ಣ. ನಾನು ಜಾಗ ಕೊಡಕ್ಕೆ ಸಿದ್ಧವಿದ್ದೇನೆ. ಕಾರ್ಖಾನೆ ತನ್ನಿ, ನಿಮ್ಮಿಂದ ಇತಿಹಾಸ ಸೃಷ್ಟಿಯಾಗಲಿ. ಇದನ್ನು ನಾನು ಕುಮಾರಣ್ಣಗೆ ಸವಾಲು ಹಾಕುತ್ತಿಲ್ಲ. ಬದಲಿಗೆ ವಿನಂತಿ ಮಾಡುತ್ತಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net