ದೇವರಹಿಪ್ಪರಗಿಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ

MLA Rajugowda Patila, Devarhipparagi, Taluk level sports event,
ದೇವರಹಿಪ್ಪರಗಿ ಪಟ್ಟಣದ ಸಿದ್ಧೇಶ್ವರ ಸ್ವಾಮೀಜಿ ಪ್ರೌಢಶಾಲೆ ಆವರಣದಲ್ಲಿ ಜರುಗಿದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಶಾಸಕ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ದೀಪ ಬೆಳಗಿಸಿ ಚಾಲನೆ ನೀಡಿದರು. ಜಡೆಶಾಂತಲಿಂಗ ಶ್ರೀಗಳು, ವೀರಗಂಗಾಧರ ಶ್ರೀಗಳು ಇದ್ದರು.
Published on

ದೇವರಹಿಪ್ಪರಗಿ: ಕ್ರೀಡೆಗಳಲ್ಲಿ ಸೋಲು, ಗೆಲುವನ್ನು ಕ್ರೀಡಾಳುಗಳು ಸಮಭಾವದಿಂದ ಸ್ವೀಕರಿಸಬೇಕು ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಹೇಳಿದರು.

ಪಟ್ಟಣದ ಸಿದ್ಧೇಶ್ವರ ಸ್ವಾಮೀಜಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಜರುಗಿದ ಸಿಂದಗಿ, ದೇವರಹಿಪ್ಪರಗಿ, ಆಲಮೇಲ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡಾಪಟುಗಳು ಸೋತಾಗ ಕುಗ್ಗದೆ ಸೋಲೇ ಗೆಲುವಿನ ಸೋಪಾನವೆಂದು ಮುನ್ನಡೆಯಬೇಕು. ಇದಕ್ಕೆ ನಾನೇ ಉತ್ತಮ ನಿದರ್ಶನ. ಚುನಾವಣೆಗಳಲ್ಲಿ 2 ಬಾರಿ ಸೋತು ಮೂರನೆಯ ಬಾರಿಗೆ ಗೆಲುವು ಕಂಡಿದ್ದೇನೆ. ಆದ್ದರಿಂದ ಸೋಲು, ಗೆಲುವುಗಳನ್ನು ಕ್ರೀಡಾಭಾವನೆಯಿಂದ ಸ್ವೀಕರಿಸಬೇಕು ಎಂದರು.

ಸ್ಥಳೀಯ ಸದಯ್ಯನಮಠದ ವೀರಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಕ್ಕಳ ಶಾರೀರಿಕ ಸದೃಢಕ್ಕೆ ಶಿಕ್ಷಣದ ಜತೆಗೆ ಕ್ರೀಡೆಗಳು ಅಗತ್ಯವಾಗಿವೆ. ಸದ್ಯ ಪಾಲಕರು ಕೇವಲ ಶಿಕ್ಷಣಕ್ಕೆ ಮಾತ್ರ ಒತ್ತು ನೀಡುತ್ತಿದ್ದು, ಕ್ರೀಡೆಗಳ ಕುರಿತು ನಿರ್ಲಕ್ಷ್ಮ್ಯ ಮಾಡಬಾರದು ಎಂದರು.

ಮಲಘಾಣ ಜಡೆಶಾಂತೇಶ್ವರ ಮಠದ ಜಡೆಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ವಿವೇಕಾನಂದ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಸಿಂದಗಿ, ದೇವರಹಿಪ್ಪರಗಿ, ಆಲಮೇಲ, ಮೋರಟಗಿ, ಗೋಲಗೇರಿ, ಕಲಕೇರಿ ವಲಯಗಳ ಎಲ್ಲ ಪ್ರೌಢಶಾಲೆಗಳ ದೈಹಿಕ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆರ್.ಆರ್.ರಾಠೋಡ, ಶಿಕ್ಷಣ ಸಂಯೋಜಕ ಎಸ್.ಎಂ.ಬಡೇಘರ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲಿಕಾರ, ಎಂ.ಜಿ.ಯಂಕಂಚಿ, ಗುರನಗೌಡ ಪಾಟೀಲ, ವಿ.ಎಂ.ಪಾಟೀಲ, ಶಾಂತಗೌಡ ಯರನಾಳ, ಪ್ರಕಾಶ ಮಲ್ಲಾರಿ, ಸಿದ್ಧಲಿಂಗ ಚೌಧರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net