ಶಾಸಕ ರಾಜು ಕಾಗೆ ಹೇಳಿಕೆ ಖಂಡನೀಯ

ANITHA POOVAIHA
Published on

ಮಡಿಕೇರಿ: ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ದೇಶದ ಪ್ರಧಾನಿ ನರೇಂದ್ರಮೋದಿ ಅವರ ಕುರಿತು ನೀಡಿರುವ ಹೇಳಿಕೆ ಖಂಡನೀಯವೆಂದು ಕೊಡಗು ಜಿಲ್ಲಾ ಬಿಜೆಪಿಯ ಮಹಿಳಾ ಮೋರ್ಚಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.


ಪತ್ರಿಕಾ ಪ್ರಕಟಣೆ ನೀಡಿರುವ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ ಅವರು, ಇಡೀ ವಿಶ್ವವೇ ಮೆಚ್ಚಿಕೊಂಡಿರುವ ನಾಯಕ ನರೇಂದ್ರಮೋದಿ ಅವರ ಬಗ್ಗೆ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗೋದೇ ಇಲ್ವಾ ಎಂದು ಶಾಸಕ ರಾಜು ಕಾಗೆ ನೀಡಿರುವ ಹೇಳಿಕೆ ಕಾಂಗ್ರೆಸ್ ಪಕ್ಷದ ಕೀಳು ಮಟ್ಟದ ಸಂಸ್ಕೃತಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.


ಜನರ ಆಶೀರ್ವಾದದಿಂದ ಮೋದಿ ಅವರು ದೀರ್ಘಾಯುಷ್ಯ ಹೊಂದುತ್ತಾರೆ. ಈ ಬಾರಿಯೂ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಲಿದ್ದಾರೆ. ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ಸಿಗರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಕೆಟ್ಟದ್ದನ್ನು ಮಾತ್ರ ಬಯಸುತ್ತದೆ. ಶಾಸಕ ರಾಜು ಕಾಗೆ ಅವರು ನೀಡಿರುವ ಹೇಳಿಕೆ ಅವರ ಪಕ್ಷದ ಸಿದ್ದಾಂತಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ.


ಕಾಂಗ್ರೆಸ್ಸಿಗರ ಕ್ಷುಲ್ಲಕ ಹೇಳಿಕೆಗಳಿಂದ ಬಿಜೆಪಿ ಎಂದಿಗೂ ಧೃತಿಗೆಡುವುದಿಲ್ಲ. ಪ್ರಧಾನಿ ನರೇಂದ್ರಮೋದಿಯವರ ಯೋಗಕ್ಷೇಮಕ್ಕಾಗಿ ಇಡೀ ಮಹಿಳಾ ಸಮೂಹ ಪ್ರಾರ್ಥಿಸುತ್ತಿದೆ. ಈಗಾಗಲೇ ಹಲವು ದೇವಾಲಯಗಳಲ್ಲಿ ಮೋದಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net