

ಅಳವಂಡಿ: ಆರ್ಥಿಕ ಮಟ್ಟ ಸುಧಾರಿಸಲು ಜಲಾನಯನ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಯೋಜನೆಯ ಯಶಸ್ಸಿಗೆ ರೈತರು ಸಹಕರಿಸಲಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದರು.
ಹಟ್ಟಿ ಗ್ರಾಮದಲ್ಲಿ ಜಿಪಂ, ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಮುರ್ಲಾಪುರ ಉಪಜಲಾನಯನದ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸೋಮವಾರ ಮಾತನಾಡಿದರು.
ರಿವಾರ್ಡ್ ಯೋಜನೆ ರಾಜ್ಯದ 20 ಜಿಲ್ಲೆಗಳ ಆಯ್ದ ತಾಲೂಕಿನಲ್ಲಿ ಜಾರಿಯಲ್ಲಿದೆ. ಅಳವಂಡಿ ಹೋಬಳಿಯ 8 ಗ್ರಾಮಗಳ ರೈತರು ಇದರ ಫಲಾನುಭವಿಗಳಾಗಿದ್ದಾರೆ. ವಿಶ್ವ ಬ್ಯಾಂಕ್ ನೆರವಿನ ಯೋಜನೆ ಇದಾಗಿದ್ದು, 8 ಗ್ರಾಮಗಳಲ್ಲಿ 14 ಕಿರು ಜಲಾನಯನ ಪ್ರದೇಶದ ಒಟ್ಟು 5900 ಹೆಕ್ಟೇರ್ ಪ್ರದೇಶದಲ್ಲಿ ಭೂ ಸಂಪನ್ಮೂಲ ಸಮೀಕ್ಷೆ ಆಧಾರದ ಮೇಲೆ ಅನುಷ್ಠಾನವಾಗುತ್ತಿದೆ. 4500 ರೈತರಿಗೆ ಉಪಯೋಗವಾಗಲಿದೆ ಎಂದರು.
ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ 2ನೇ ರಾಜ್ಯ ಕರ್ನಾಟಕವಾಗಿದೆ. 4 ಲಕ್ಷ ಕೋಟಿ ರೂ. ತೆರಿಗೆ ಪಾವತಿಸಿದರೂ 50 ಸಾವಿರ ಕೋಟಿ ರೂ. ಮಾತ್ರ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ರೈತರ ವಿರೋಧಿ ನೀತಿ ಅನುಸರಿಸುತ್ತಿದೆ. ರೈತರು ಬರಗಾಲದ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಕೇಂದ್ರ ಸಹಾಯಧನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಸಲಾಪುರ, ಹಟ್ಟಿ, ಬೆಳಗಟ್ಟಿ, ಘಟ್ಟಿರಡ್ಡಿಹಾಳ ಗ್ರಾಮಗಳಿಗೆ ನೀರು ಒದಗಿಸುವ 10 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಭಾಗದ ರಸ್ತೆ, ಸೇತುವೆ ಹಾಗೂ ಮೂಲ ಸೌಕರ್ಯಗಳ ಸುಧಾರಣೆಗೆ 780 ಕೋಟಿ ರೂ. ವೆಚ್ಚದ ಕಾಮಗಾರಿಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಭರವಸೆ ನೀಡಿದರು.
ಜಿಲ್ಲಾ ಉಪ ಕೃಷಿ ನಿರ್ದೇಶಕ ಸಹದೇವ ಯರಗುಪ್ಪ ಮಾತನಾಡಿ, ಅಂತರ್ಜಲ ಮರುಪೂರಣ, ಮಣ್ಣಿನ ತೇವಾಂಶ ಲಭ್ಯತೆ ಮತ್ತು ರಕ್ಷಣಾತ್ಮಕ ನೀರಾವರಿಗಾಗಿ ಮಳೆ ಕೊಯ್ಲು ಮಾಡಬೇಕು. ತೋಟಗಾರಿಕೆ ಮತ್ತು ಕೃಷಿ ಅರಣ್ಯ ಚಟುವಟಿಕೆ ಮೂಲಕ ರೈತರು ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಹಟ್ಟಿ ಗ್ರಾಪಂ ಅಧ್ಯಕ್ಷೆ ಪರವಿನಬಾನು, ಕವಲೂರು ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ, ಉಪಾಧ್ಯಕ್ಷರಾದ ನಿಂಗನಗೌಡ, ಅನ್ನಪೂರ್ಣಾ, ಪ್ರಮುಖರಾದ ಭರಮಪ್ಪ ನಗರ, ನೀಲಪ್ಪ ಕರಿಗಾರ, ತೋಟಪ್ಪ, ಮಲ್ಲೇಶಪ್ಪ, ಗವಿಸಿದ್ದನಗೌಡ, ಚೌಡಪ್ಪ, ಭೀಮೇಶಪ್ಪ, ಹೊನ್ನಪ್ಪಗೌಡ, ಪ್ರಭುಗೌಡ, ರೇಣುಕಪ್ಪ, ಅರವಿಂದಪ್ಪ, ಸಹಾಯಕ ಕೃಷಿ ನಿರ್ದೇಶಕ ಜೀವನಸಾಬ್ ಕುಷ್ಟಗಿ, ಕೃಷಿ ಅಧಿಕಾರಿಗಳಾದ ಪ್ರತಾಪಗೌಡ, ಬಿ.ಎಂ. ಗೊಬ್ಬರಗುಂಪಿ, ವೀರೇಶ, ಮಾರುತಿ ಇತರರಿದ್ದರು.