

ಹಳಿಯಾಳ: ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ರೈತರ ಬೆನ್ನೆಲುಬಾಗಿ ನಿಂತಿರುವುದರಿಂದಲೇ 9ಬಾರಿ ಶಾಸಕರಾಗಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ. ಪ್ರಸ್ತುತ ಕಬ್ಬು ಬೆಳೆಗಾರ ರೈತರ ಸಮಸ್ಯೆ ಪರಿಹರಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಳಿಯಾಳ ವಕ್ತಾರ ಉಮೇಶ ಬೋಳಶೆಟ್ಟಿ ಹೇಳಿದರು.
ಪಟ್ಟಣದ ಶಾಸಕರ ಜನಸಂಪರ್ಕ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರ ರೈತರ ಪರವಾಗಿ ಡಿಸಿ, ಎಡಿಸಿ, ಎಸಿ ಅವರೊಂದಿಗೆ ಅವರು ಮಾತನಾಡಿದ್ದು, ಅರಣ್ಯದಂಚಿನ ರೈತರ ಕಬ್ಬನ್ನು ಮೊದಲು ಸಾಗಿಸಬೇಕು. ಸ್ಥಳೀಯ ರೈತರ ಕಬ್ಬಿಗೆ ಪ್ರಥಮ ಆದ್ಯತೆ ನೀಡುವಂತೆ ಹಾಗೂ ಕಬ್ಬಿಗೆ ಉತ್ತಮ ದರ ಕೊಡಿಸುವಲ್ಲಿ ರೈತರಿಗೆ ನೆರವಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಬೋಳಶೆಟ್ಟಿ ತಿಳಿಸಿದರು.
ಅತಿಯಾದ ಮಳೆಯಿಂದ ಹಾನಿಗೊಳಗಾದ ಭತ್ತ, ಹತ್ತಿ, ಗೋವಿನ ಜೊಳ, ಕಬ್ಬು ಬೆಳೆಗೆ ಪರಿಹಾರ ಒದಗಿಸಲು ಆಣೇವಾರಿ ಸರ್ವೆ ಮಾಡಿ ಸರ್ಕಾರದಿಂದ ಶೀಘ್ರ ಪರಿಹಾರ ಒದಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಯೂಥ್ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ ಮಾತನಾಡಿ, ಶಾಸಕ ಆರ್.ವಿ. ದೇಶಪಾಂಡೆ ಅವರು, ಕ್ಷೇತ್ರಕ್ಕೆ ಸಕ್ಕರೆ ಕಾರ್ಖಾನೆ ತಂದು ರೈತರಿಗೆ ಅನುಕೂಲ ಮಾಡಿದ್ದಾರೆ. ರೈತರಿಗೆ ನೂರಕ್ಕೆ ನೂರರಷ್ಟು ಪರಿಹಾರ ಒದಗಿಸುವುದು ಅವರೇ ಎಂದರು.
ಕೆಪಿಸಿಸಿ ಸದಸ್ಯ ಸುಭಾಷ ಕೊರ್ವೆಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ ಮಾತನಾಡಿದರು. ಪುರಸಭೆ ಸದಸ್ಯ ಸತ್ಯಜಿತ್ ಗಿರಿ, ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಚವ್ಹಾಣ, ಶಂಕರ ಬೆಳಗಾಂವಕರ, ಅಜರುದ್ದೀನ್ ಬಸರಿಕಟ್ಟಿ ಇತರರಿದ್ದರು.