3 ವರ್ಷದಲ್ಲಿ ಮೆಡಿಕಲ್ ಕಾಲೇಜು ಲೋಕಾರ್ಪಣೆ - ಶಾಸಕ ಅಶೋಕ್ ಕುಮಾರ್ ರೈ ಅಭಿಲಾಷೆ

Published on

ಪುತ್ತೂರು: ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಮಾರ್ಗಸೂಚಿಯಂತೆ ಪುತ್ತೂರಿನ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ೩೫೦ರಿಂದ ೪೦೦ ಹಾಸಿಗೆಯ ಆಸ್ಪತ್ರೆಯನ್ನಾಗಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಆ ಬಳಿಕ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಶಕುಂತಳಾ ಶೆಟ್ಟಿ ಶಾಸಕರಾದ ಸಂದರ್ಭ ಅಗತ್ಯ ಜಾಗ ಕಾಯ್ದಿರಿಸಿದ್ದು, ಆ ಬಳಿಕ ಯಾವುದೇ ಪ್ರಯತ್ನಗಳು ನಡೆಯದೆ ಕಡತ ಮೂಲೆ ಸೇರಿತ್ತು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಈಗಿರುವ ಆಸ್ಪತ್ರೆಯನ್ನು ಮುಚ್ಚಿ ಕೆಲಸ ಮಾಡಲು ಸಾಧ್ಯವಿಲ್ಲವಾದ್ದರಿಂದ, ಸೇಡಿಯಾಪಿನ ಜಾಗದಲ್ಲೇ ಹೊಸ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕಾಗಬಹುದು. ಈ ನಿಟ್ಟಿನಲ್ಲಿ ಸಮಿತಿಯನ್ನು ಮಾಡಿ, ಆಸ್ಪತ್ರೆಯನ್ನು ಎಲ್ಲಿ ಮಾಡುವುದೆಂಬ ತೀರ್ಮಾನವನ್ನು ಕೈಗೊಳ್ಳಲಾಗುವುದು. ನಿವೇಶನದಲ್ಲಿ ಆಸ್ಪತ್ರೆಗೆ ಜಾಗ ನಿಗದಿ ಮಾಡಬೇಕು. ಡಿ.ಪಿ.ಆರ್. ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕು. ಬಳಿಕ ಸಚಿವ ಸಂಪುಟದಲ್ಲಿ ಮಂಜೂರಾತಿ ಪಡೆದುಕೊಂಡು ಟೆಂಡರ್‌ಗೆ ಹೋಗುವ ಪ್ರಕ್ರಿಯೆ ನಡೆಯಬೇಕಾಗಿದೆ. ೬ ತಿಂಗಳ ಒಳಗೆ ಹೊಸ ಆಸ್ಪತ್ರೆಗೆ ಶಿಲಾನ್ಯಾಸ ಮಾಡುವ ಕಾರ್ಯ ನಡೆಯಬೇಕು. ಮೂರು ವರ್ಷದಲ್ಲಿ ಮೆಡಿಕಲ್ ಕಾಲೇಜು ಲೋಕಾರ್ಪಣೆ ಮಾಡಬೇಕೆಂಬ ಯೋಜನೆಯಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಸ್ಪತ್ರೆಗೆ ೩೫೦-೪೦೦ ಕೋಟಿ ರೂ.ಅನುದಾನ ಬೇಕಾಗಿದ್ದು, ಪ್ರಾರಂಭದಲ್ಲಿ ೧೫೦ ಕೋಟಿ ರೂ.ಅಗತ್ಯವಿದೆ. ಎರಡು ವರ್ಷದ ಅವಯಲ್ಲಿ ಆಸ್ಪತ್ರೆ ಪೂರ್ಣಗೊಳ್ಳುವ ಭರವಸೆಯಿದೆ. ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಉತ್ತಮ ಜಾಗವನ್ನು ಮೀನು ಒಣಗಿಸುವ ಘಟಕಕ್ಕೆ ಮೀಸಲಿಡಲು ಮುಂದಾದ ಪೆದ್ದರು ಇದ್ದಾರೆ ಎಂದರು.

ಪುತ್ತೂರಿನಲ್ಲಿ ಪಿಪಿಪಿ ಮಾಡಬೇಕೆಂಬ ಒತ್ತಡವಿದ್ದರೂ, ಅದನ್ನು ಒಪ್ಪದ ಕಾರಣ ಸರ್ಕಾರಿ ಮೆಡಿಕಲ್ ಕಾಲೇಜು ನೀಡಲಾಗಿದೆ. ಪಿಪಿಪಿ ಮಾದರಿಯಾದರೆ ಖಾಸಗಿ ಆಸ್ಪತ್ರೆಯಾಗುವ ಸಾಧ್ಯತೆ ಇದೆ ಮತ್ತು ಸರ್ಕಾರದ ಹತೋಟಿಯಲ್ಲಿ ಇರುವುದಿಲ್ಲ. ಈ ವರ್ಷದಲ್ಲಿ ಆಸ್ಪತ್ರೆಗೆ ಮಂಜೂರಾತಿಯನ್ನು ತೆಗೆದುಕೊಂಡಿರುವ ಕಾರಣದಿಂದ ಮೆಡಿಕಲ್ ಕಾಲೇಜಿಗೆ ಇನ್ನು ಬಜೆಟ್ ನಲ್ಲಿ ಮಂಜೂರಾತಿ ಪಡೆಯುವ ಅಗತ್ಯವಿಲ್ಲ.

| ಅಶೋಕ್ ಕುಮಾರ್ ರೈ

ಶಾಸಕ, ಪುತ್ತೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net