ಪುತ್ತೂರು: ಭಾರತೀಯ ವಿಶ್ವವಿದ್ಯಾಯಲಗಳ ಒಕ್ಕೂಟದ ನಿರ್ದೇಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮತ್ತು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಉಪ್ಪಿನಂಗಡಿಯಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಪುರುಷರ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್ ಕ್ರೀಡಾಕೂಟ ನ.೧೯ರಂದು ನಡೆಯಲಿದ್ದು, ದೇಶದ ೧೫೦ ವಿಶ್ವವಿದ್ಯಾಲಯಗಳ ೧೦೦೦ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಷ್ಟ್ರೀಯಮಟ್ಟದ ಈ ಕ್ರೀಡಾಕೂಟ ಉಪ್ಪಿನಂಗಡಿಯಲ್ಲಿ ಆಯೋಜಿಸಲಾಗುತ್ತಿದೆ. ೧೯ರಂದು ಮಧ್ಯಾಹ್ನ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಿಂದ ಕ್ರೀಡಾಜ್ಯೋತಿಯ ಭವ್ಯ ಮೆರವಣಿಗೆ ಉಪ್ಪಿನಂಗಡಿ ಪೇಟೆಯಲ್ಲಿ ಸಾಗಿ ಕಾಲೇಜು ಆವರಣಕ್ಕೆ ತಲುಪಲಿದೆ. ಸಂಜೆ ೪ ಗಂಟೆಗೆ ಕ್ರಾಸ್‌ಕಂಟ್ರಿ ಸ್ಪರ್ಧೆ ಆರಂಭಗೊಳ್ಳಲಿದೆ. ೫.೩೦ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್. ಸಂಸದ ಬ್ರಿಜೇಶ್ ಚೌಟ, ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪಿ.ಎಲ್ ಧರ್ಮ ಮತ್ತಿತರರು ಭಾಗವಹಿಸಲಿದ್ದಾರೆ.
ಉಪ್ಪಿನಂಗಡಿ ವ್ಯಾಪ್ತಿಯ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಾಗವಹಿಸುವ ಎಲ್ಲ ಕ್ರೀಡಾಪಟುಗಳು ಹಾಗೂ ಅಽಕಾರಿಗಳಿಗೆ ಉಚಿತ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಆಗಮಿಸುವವರಿಗೆ ಮಂಗಳೂರು ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಿಂದ ಉಪ್ಪಿನಂಗಡಿಗೆ ಆಗಮಿಸಲು ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘಟನಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಂ, ಪ್ರಾಂಶುಪಾಲ ಪ್ರೊ. ರವಿರಾಜ್. ಉಪನ್ಯಾಸಕ ಡಾ. ಪ್ರಮೋದ್ ಎಂ ಜಿ ಉಪಸ್ಥಿತರಿದ್ದರು.