ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಕೆಗೆ ವಿಮೆ ಬರುವುದಿಲ್ಲ ಎಂಬ ಗೊಂದಲ ಏರ್ಪಟ್ಟಿದ್ದು, ಮುಖ್ಯಮಂತ್ರಿ ಹಾಗೂ ತೋಟಗಾರಿಕಾ ಸಚಿವರಲ್ಲಿ ಮಾತನಾಡಿ ಬೆಳೆ ವಿಮೆಯನ್ನು ಕೊಡಿಸಲಾಗಿತ್ತು. ವಿಮೆಗೆ ಶೇ.70ರಷ್ಟು ರಾಜ್ಯ ಹಾಗೂ ಶೇ.30 ಕೇಂದ್ರ ಸರ್ಕಾರ ನೀಡುತ್ತದೆ. ಜಿಲ್ಲೆಯ ಅಡಕೆ ಕೃಷಿಗೆ 1,57,00,36,316 ರೂ. ಕ್ಲೈಮ್ ಇದ್ದು, 69,44,10,846 ರೂ. ಬಂದಿದೆ. ಈ ವರ್ಷ ಹೆಚ್ಚು ಮೊತ್ತ ವಿಮೆಯಿಂದ ಬಂದಿದ್ದು, ಅಡಕೆ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಪುತ್ತೂರಿಗೆ 28,85,77,806 ರೂ. ಒಟ್ಟು ಕ್ಲೈಮ್ ಇದ್ದು, 15,77,18,339 ರೂ. ಈಗಾಗಲೇ ಬಿಡುಗಡೆಯಾಗಿದೆ. ಸುಳ್ಯದಲ್ಲಿ 30,70,81,228 ರೂ. ಕ್ಲೈಮ್ ಇದ್ದು, 18,54,73,871 ರೂ. ಬಿಡುಗಡೆಗೊಂಡಿದೆ. ಬೆಳ್ತಂಗಡಿಯಲ್ಲಿ 46,00,17,767 ರೂ. ಕ್ಲೈಮ್ ಇದ್ದು, 12,68,30,370 ರೂ. ಈಗಾಗಲೇ ಖಾತೆಗೆ ಬಂದಿದೆ. ಕಡಬ ಭಾಗದಲ್ಲಿ 19,89,48,130 ರೂ. ಕ್ಲೈಮ್ ಇದ್ದು, 16,75,55,150 ರೂ. ಬಿಡುಗಡೆಯಾಗಿದೆ. ಉಳ್ಳಾಲದಲ್ಲಿ 22,06,708 ರೂ. ಕ್ಲೈಮ್ ಇದ್ದು, ಪೂರ್ತಿ ಹಣ ಪಾವತಿಯಾಗಿದೆ. ಮೂಲ್ಕಿಯಲ್ಲಿ 15,03,654 ರೂ. ಕ್ಲೈಮ್ ಇದೆ. ಬಂಟ್ವಾಳ ಭಾಗದಲ್ಲಿ ಇನ್ನು ಬಿಡುಗಡೆಯಾಗಬೇಕಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರಗಳು ಪ್ರತ್ಯೇಕ ಸರ್ವೇ ನಡೆಸಿ ಹಣ ಬಿಡುಗಡೆ ನಡೆಯುತ್ತಿದ್ದು, ಮುಂದಿನ ದಿನದಲ್ಲಿ ಅನುಪಾತ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಬೆಳೆ ನಾಶದ ಅಂಶಕ್ಕಿAತ ಹೆಚ್ಚು ಪರಿಹಾರ ಹೋಗುತ್ತಿದೆ ಎಂಬುದು ಕಂಪನಿಗಳು ಉಲ್ಲೇಖಿಸಿದ ಕಾರಣದಿಂದ ಅನುಪಾತ ಕಡಿಮೆಯಾಗಲು ಸಾಧ್ಯವಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಸೇರ್ಪಡೆ ಮಾಡಿದರೆ ಮಾತ್ರ ರೈತರಿಗೆ ಪ್ರಯೋಜನ ಸಿಗುತ್ತದೆ. ಕಳೆದ ಬಾರಿಯೇ ಅಡಕೆಯನ್ನು ಕೈಬಿಡುವ ವಿಚಾರವಿತ್ತು. ಸಹಕಾರಿ ಸಂಘಗಳ ಮೂಲಕ ಕಂತು ಸಂಗ್ರಹವಾಗುವ ಸಂದರ್ಭದ ಜನರನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗಲಾಗಿತ್ತು. ರಾಜ್ಯದ 28 ಬೆಳೆಗಳು ವಾಣಿಜ್ಯ ಎಂದಿದ್ದು, ಆಹಾರ ಬೆಳೆಯ ವಿಭಾಗಕ್ಕೆ ಸೇರಿಸುವ ಕೆಲಸವಾಗಬೇಕಾಗಿದೆ ಎಂದು ತಿಳಿಸಿದರು.