ಮೂರು ತಿಂಗಳು ಇ-ಖಾತೆ ಅಭಿಯಾನ: ಶಾಸಕ ರವಿಕುಮಾರ್ ಗಣಿಗ ಮಾಹಿತಿ

MLA press meet on e-Khata campaign Mandya
Published on

ಮಂಡ್ಯ: ಸಾರ್ವಜನಿಕರ ಬಹುದಿನದ ಬೇಡಿಕೆಗೆ ತಕ್ಕಂತೆ ಇ-ಖಾತಾ ವಿತರಿಸುವ ಯೋಜನೆಯನ್ನು ರಾಜ್ಯಸರ್ಕಾರ ಜಾರಿಗೊಳಿಸಿದೆ. ಅದರಂತೆ ಮೂರು ತಿಂಗಳವರೆಗೆ ಈ ಅಭಿಯಾನ ನಡೆಯಲಿದ್ದು, ಮಂಡ್ಯ ನಗರ ವ್ಯಾಪ್ತಿಯ ನಾಗರಿಕರು ಅವಕಾಶ ಬಳಸಿಕೊಳ್ಳಬೇಕೆಂದು ಶಾಸಕ ರವಿಕುಮಾರ್ ಗಣಿಗ ಮನವಿ ಮಾಡಿದರು.

ನಗರಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ನಗರಸಭೆ ವ್ಯಾಪ್ತಿಯ ಸುಮಾರು 20 ಸಾವಿರ ಆಸ್ತಿ ಮಾಲೀಕರಿಗೆ ಇ- ಖಾತಾ ವಿತರಿಸುವ ಅಭಿಯಾನ ಸಹಕಾರಿಯಾಗಲಿದೆ. ನಗರ ವ್ಯಾಪ್ತಿ ನಾಗರಿಕರ ಕಂದಾಯ ಅಥವಾ ಇತರೆ ಖಾಸಗಿ ಆಸ್ತಿಗಳಲ್ಲಿ ನಿರ್ಮಾಣಗೊಂಡಿರುವ ವಸತಿ ಅಥವಾ ಇತರೆ ಕಟ್ಟಡಗಳು ಮತ್ತು ನಿವೇಶನಗಳಿಗೆ ಮುಂದಿನ 3 ತಿಂಗಳೊಳಗೆ ಇ-ಖಾತಾ ವಿತರಿಸಲು ಸಮರೋಪಾದಿ ಕಾರ್ಯನಿರ್ವಹಣೆಗೆ ನಗರಾಡಳಿತ ಸಜ್ಜಾಗಿದೆ. ನಗರದ 35 ವಾರ್ಡ್‌ಗಳ ಪೈಕಿ ತಲಾ 8 ವಾರ್ಡ್‌ಗಳಂತೆ 4 ವಿಭಾಗಗಳ ಮೂಲಕ ಅರ್ಜಿ ಸ್ವೀಕರಿಸಲಾಗುವುದು. ಪ್ರಸ್ತುತ ನಗರಸಭಾ ಕಾರ್ಯಾಲಯದ ಆವರಣದಲ್ಲಿ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರಮುಖ 4 ವಿಭಾಗಗಳಲ್ಲಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿವರಿಸಿದರು.

ಮುಖ್ಯವಾಗಿ ಇ- ಖಾತಾ ಅಭಿಯಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರನ್ನು ಸುಖಾಸುಮ್ಮನೆ ಅಲೆದಾಡಿಸುವುದು, ಕಡತ ನೋಡದೇ ನಿರ್ಲಕ್ಷೃ ವಹಿಸುವುದನ್ನು ಮಾಡಿದರೆ ಅಧಿಕಾರಿಗಳ ತಲೆದಂಡ ಖಚಿತ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಮುಡಾ ಅಧ್ಯಕ್ಷ ನಹೀಂ, ಪೌರಾಯುಕ್ತೆ ಪಂಪಾಶ್ರೀ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್ ಹಾಗೂ ನಗರಸಭಾ ಸದಸ್ಯರು ಹಾಜರಿದ್ದರು.

ಇ-ಖಾತೆ ಪಡೆಯಲು ಬೇಕಿರುವ ದಾಖಲೆಗಳಿವು

ಇ-ಖಾತಾಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಆಸ್ತಿಗಳ ಮಾಲೀಕರು ಕೆಲ ದಾಖಲೆ ಸಲ್ಲಿಸಬಹುದು. ಅದರಂತೆ ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಋಜುವಾತುಪಡಿಸುವ ನೋಂದಾಯಿತ ಮಾರಾಟ ಪತ್ರ, ದಾನ ಪತ್ರ, ವಿಭಾಗಪತ್ರ ಮತ್ತು ಸರ್ಕಾರ, ನಿಗಮ ಮಂಡಳಿ ಹಾಗೂ ಕಂದಾಯ ಇಲಾಖೆ ನೀಡಿರುವ ಮಂಜೂರಾತಿ ಪತ್ರ, ಹಕ್ಕುಪತ್ರ, ಸಕ್ಷಮ ಪ್ರಾಧಿಕಾರ ಅನುಮೋದಿಸುವ ದೃಢೀಕೃತ ಪ್ರತಿ, ನಿವೇಶನ ಬಿಡುಗಡೆ ಪತ್ರ, ಇ.ಸಿ, ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರು ಹಾಗೂ ಸ್ವತ್ತಿನ ಪೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net