ಪ್ರಮೋದ ಮುತಾಲಿಕ್ ಗಡಿಪಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಒತ್ತಾಯ

prasad abbayya
Published on

ಹುಬ್ಬಳ್ಳಿ: ಮುಂದಿನ ದಿನಗಳಲ್ಲಿ ಮಸೀದಿಗಳಲ್ಲಿ ಹೊಕ್ಕು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಪ್ರಮೋದ ಮುತಾಲಿಕ್ ಹೇಳುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕೋಮುಸೌಹಾರ್ದ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆರೋಪಿಸಿದ್ದಾರೆ.

ಹುಬ್ಬಳ್ಳಿ ವಾಣಿಜ್ಯ ನಗರಿ. ಇಲ್ಲಿ ಸರ್ವ ಧರ್ಮೀಯರು ಶಾಂತಿ- ಸೌಹಾರ್ದದಿಂದ ಧಾರ್ವಿುಕ ಆಚರಣೆ ನಡೆಸುತ್ತ ಬಂದಿದ್ದಾರೆ. ಒಬ್ಬರ ಆಚರಣೆಯಲ್ಲಿ ಮತ್ತೊಬ್ಬರು ಸಹೋದರತ್ವದಿಂದ ಭಾಗಿಯಾಗುತ್ತಿದ್ದಾರೆ.

ಕಳೆದ ಹಲವಾರು ದಶಕಗಳಿಂದ ನಗರದಲ್ಲಿ ಯಾವುದೇ ಗಲಾಟೆ-ಗದ್ದಲ ನಡೆಯದೇ ಕೋಮು ಗಲಭೆಗಳಿಗೆ ಅವಕಾಶ ನೀಡದೆ ಪ್ರತಿಯೊಬ್ಬರೂ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದಿದ್ದಾರೆ. ಅಪ್ರಭುದ್ಧ ಹೇಳಿಕೆಯಿಂದ ಜನರ ಮನಸ್ಸಲ್ಲಿ ಜಾತೀಯ ವಿಷಬೀಜ ಬಿತ್ತಲಾಗುತ್ತಿದೆ. ಸರ್ಕಾರ ಕೂಡಲೇ ಮುತಾಲಿಕ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ಯಾವ ರೀತಿ ಗೋವಾ ರಾಜ್ಯ ಪ್ರವೇಶಕ್ಕೆ ಅಲ್ಲಿಯ ಸರ್ಕಾರ ನಿರ್ಬಂಧ ಹೇರಿತ್ತೋ ಅದೇ ರೀತಿ ಕರ್ನಾಟಕದಿಂದಲೂ ಇವರನ್ನು ಗಡಿಪಾರು ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಪ್ರಚೋದನಕಾರಿ ಹೇಳಿಕೆ ಮೂಲಕ ಉದ್ದೇಶ ಪೂರ್ವಕವಾಗಿ ಜನರ ಭಾವನೆ ಕೆರಳಿಸಲಾಗುತ್ತದೆ. ತಳಬುಡ ಇಲ್ಲದ ಅವರ ಹೇಳಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು. ಇಂಥ ಕೀಳು ಮನಸ್ಥಿತಿಯವರನ್ನು ಕಡೆಗಣಿಸಿ, ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಬೇಕೆಂದು ಪ್ರಕಟಣೆ ಮೂಲಕ ಜನರಲ್ಲಿ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net