ಹಿಂದು-ಮುಸಲ್ಮಾನರು ಸಹೋದರರಂತೆ ಇರಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು

20-RNR-03
Published on

ರಾಣೆಬೆನ್ನೂರ: ಕಾಂಗ್ರೆಸ್ ಪಕ್ಷ ಸದಾ ಬಡವರು, ಅಲ್ಪಸಂಖ್ಯಾತರು ಏಳಿಗೆಗೆ ಶ್ರಮಿಸುತ್ತಾ ಬಂದಿದೆ. ದೇಶದಲ್ಲಿ ಹಿಂದು ಮುಸಲ್ಮಾನರು ಅಣ್ಣಂತಮ್ಮದಿರಂತೆ ಇರಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ತಾಲೂಕ ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದರೆ ದೇಶದಲ್ಲಿ ಶಾಂತಿ, ನೆಮ್ಮದಿಯ ವಾತಾವರಣವಿರುತ್ತದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ. ಬ್ರಿಟಿಷ್‌ರ ಆಳ್ವಿಕೆಯಲ್ಲಿ ಮಾಡಿದಂತೆ ಬಿಜೆಪಿಯವರು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇದೇ ರೀತಿ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.
ಸಾರ್ವಜನಿಕರು ನನ್ನ ಬಳಿ ವೈಯಕ್ತಿಕ ಕೆಲಸಗಳಿಗಿಂತ ಊರು, ಸಮಾಜದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡುವಂತೆ ಕೋರಿದರೆ ಮತ್ತಷ್ಟು ಪ್ರಭುದ್ಧತೆಯಿಂದ ಆಡಳಿತ ನಡೆಸಲು ಸಹಕಾರಿಯಾಗುತ್ತದೆ ಎಂದರು.
ನದಾಫ್/ಪಿಂಜಾರ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಹುಸೇನಸಾಬ್ ಬಿದರಿ, ಬಿ.ಬಿ. ನಂದ್ಯಾಲ, ಬಡನಸಾಬ ಚಳಗೇರಿ, ತಾಲೂಕ ನದಾಫ್ ಪಿಂಜಾರ ಸಂಘದ ಅಧ್ಯಕ್ಷ ಮೌಲಾನಸಾಬ ಹಿತ್ತಲಮನಿ, ಕಾರ್ಯದರ್ಶಿ ಜಾಗೀರ, ಜಮಾಲಸಾಬ ಅಸುಂಡಿ, ಬಾಷಾ ಹೊನ್ನೂರುಸಾಬ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net