

ಮಡಿಕೇರಿ: ಭಾಗಮಂಡಲ ಗ್ರಾ.ಪಂ ವ್ಯಾಪ್ತಿಯ ಅರಣ್ಯ ಭಾಗದಲ್ಲಿ ಅತಿಕ್ರಮಣ ಪ್ರವೇಶವಾಗಿದೆ ಎಂದು ಆರೋಪಿಸಿ ಕುಡಿಯುವ ನೀರು ಸರಬರಾಜಿನ ಸಾಮಾಗ್ರಿಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡ ಪ್ರಕರಣವನ್ನು ಇತ್ಯರ್ಥ ಪಡಿಸಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಟ್ಟ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಕ್ರಮ ಸ್ವಾಗತಾರ್ಹವಾಗಿದ್ದು, ಗ್ರಾಮಸ್ಥರ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕಾಂಗ್ರೆಸ್ ಸೇವಾ ಕಚೇರಿಯ ಭಾಗಮಂಡಲ ಹೋಬಳಿ ಅಧ್ಯಕ್ಷ ಕೆ.ಸಿ.ವೆಂಕಟೇಶ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾಗಮಂಡಲ ಗ್ರಾ.ಪಂ ವತಿಯಿಂದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿದ್ದು, ದೇವರ ಕಾಡು ಅರಣ್ಯ ಪ್ರದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ನೀರಿನ ಪಂಪ್, ಮೋಟಾರ್ ಹಾಗೂ ಪೈಪ್’ಗಳನ್ನು ವಶಪಡಿಸಿಕೊಂಡಿತ್ತು. ಜತೆಗೆ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ರಸ್ತೆ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ರಸ್ತೆ ಮಾಡಿದ್ದಾರೆ ಎಂದು ಕೇಸ್ ದಾಖಲಿಸಿದ್ದರು. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರೋಪಾಯಗಳನ್ನು ಸೂಚಿಸುವ ಶಾಸಕ ಪೊನ್ನಣ್ಣ ಅವರ ಕಾರ್ಯವೈಖರಿ ಬಗ್ಗೆ ಗ್ರಾಮಸ್ಥರಿಗೆ ತೃಪ್ತಿ ಇದೆ ಎಂದು ತಿಳಿಸಿದ್ದಾರೆ.
ಕಾನೂನು ರೀತಿ ಅಡಚಣೆ ಬಂದರೆ ತಾವು ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡುವ ಮೂಲಕ ಗ್ರಾಮಸ್ಥರಿಗೆ ನೆರವಾಗಿದ್ದರು. ಇದೀಗ ಸ್ಥಳೀಯ ನಿವಾಸಿಗಳು ನೆಮ್ಮದಿಯಾಗಿದ್ದಾರೆ. ಇದು ಒಬ್ಬ ಶಾಸಕನ ಇಚ್ಛಾಶಕ್ತಿಗೆ ಸಾಕ್ಷಿಯಾಗಿದ್ದು, ಇನ್ನು ಮುಂದೆಯೂ ನಾವು ಇದೇ ರೀತಿಯ ಸಹಕಾರ ಬಯಸುವುದಾಗಿ ವೆಂಕಟೇಶ್ ತಿಳಿಸಿದ್ದಾರೆ.