ಶಾಸಕ ಜಿಟಿಡಿ ಸಹಕಾರ ಕ್ಷೇತ್ರದಲ್ಲಿ ಹೊರಗಿನವರನ್ನು ಮೀಸಲಾತಿ ನೆಪದಲ್ಲಿ ತಂದು ಕೂರಿಸುವುದನ್ನು ಮಾತ್ರ ವಿರೋಧಿಸಿದ್ದಾರೆ ಹೊರತು ಮೀಸಲಾತಿಯನಲ್ಲ: ದಲಿತ ಮುಖಂಡ ಸ್ಪಷ್ಟನೆ

GTD
Published on

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಅವರು ಸಹಕಾರ ಕ್ಷೇತ್ರದಲ್ಲಿ ನಾಮನಿರ್ದೇಶನ ವೇಳೆ ಹೊರಗಿನವರನ್ನು ಮೀಸಲಾತಿ ನೆಪದಲ್ಲಿ ತಂದು ಕೂರಿಸುವುದನ್ನು ಮಾತ್ರ ವಿರೋಧಿಸಿದ್ದಾರೆ ಹೊರತು ಮೀಸಲಾತಿಯನ್ನು ಅಲ್ಲ ದಲಿತ ಮುಖಂಡರು ಸ್ಪಷ್ಟಪಡಿಸಿದರು.

‘ನಾಮನಿರ್ದೇಶನ ವೇಳೆ ಮೀಸಲಾತಿ ಸರಿಯಲ್ಲ. ಹೊರಗಿನವರನ್ನು ಮೀಸಲಾತಿ ನೆಪದಲ್ಲಿ ತಂದು ಕೂರಿಸಿದಲ್ಲಿ ಸ್ಥಳೀಯ ಆಡಳಿತಗಳಲ್ಲಿ ಅಧಿಕಾರಿಗಳೊಡನೆ ಸೇರಿಕೊಂಡಾಗ ಅವರದೇ ಪ್ರಾಬಲ್ಯವಾಗುತ್ತದೆ’ ಎಂದು ಜಿಟಿಡಿ ಹೇಳಿದ್ದಾರೆ. ಅವರ ಹೇಳಿಕೆ ಸರಿಯಾಗಿದೆ ಎಂದು ಶುಕ್ರವಾರ ಜಿಪಂ ಮಾಜಿ ಉಪಾಧ್ಯಕ್ಷ ಸುಬ್ಬಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿ.ಟಿ.ದೇವೇಗೌಡ ಅವರು ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಬಗ್ಗೆ ಸರಿಯಾಗಿ ವಿಶ್ಲೇಷಣೆ ಮಾಡಿದ್ದಾರೆ. ಆದರೆ ಸಹಕಾರ ಕ್ಷೇತ್ರದ ಮೀಸಲಾತಿಗೆ ವಿರೋಧಿಸಿದ್ದಾರೆ ಎಂಬ ತಪ್ಪರ್ಥದಲ್ಲಿ ಅವರ ವಿರುದ್ಧ ಪ್ರತಿಭಟನೆಗಳು ನಡೆದಿವೆ. ವಾಸ್ತವ ಅಂಶವನ್ನು ಮಾತ್ರ ಜಿ.ಟಿ.ದೇವೇಗೌಡ ಅವರು ತಿಳಿಸಿದ್ದಾರೆ ಹೊರತು, ಮೀಸಲಾತಿ ವಿರೋಧಿಸಿಲ್ಲ. ಆದರೆ, ಕೆಲವರು ಈ ವಿಚಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದರು.

‘ಸಹಕಾರ ಕ್ಷೇತ್ರದಲ್ಲಿ ಈಗಾಗಲೇ ಮೀಸಲಾತಿ ಇದೆ. ಆದರೆ, ನಾಮನಿರ್ದೇಶನ ವೇಳೆ ಮೀಸಲಾತಿ ಸರಿಯಲ್ಲ. ಹೊರಗಿನವರನ್ನು ಮೀಸಲಾತಿ ನೆಪದಲ್ಲಿ ತಂದು ಕೂರಿಸಿದಲ್ಲಿ ಸ್ಥಳೀಯ ಆಡಳಿತಗಳಲ್ಲಿ ಅಧಿಕಾರಿಗಳೊಡನೆ ಸೇರಿಕೊಂಡಾಗ ಅವರದೇ ಪ್ರಾಬಲ್ಯವಾಗುತ್ತದೆ. ಹೀಗಾಗಿ ಸ್ಥಳೀಯವಾಗಿ ಮೀಸಲಾತಿ ಹಾಗೂ ಚುನಾವಣೆ ಮೊದಲಾದವುಗಳ ಮೂಲಕ ಆಯ್ಕೆಯಾದವರಿಗೆ ಪ್ರಾಮುಖ್ಯತೆ ಇರುವುದಿಲ್ಲ’ ಎಂದಷ್ಟೇ ಜಿ.ಟಿ.ದೇವೇಗೌಡರು ಸದನದಲ್ಲಿ ಹೇಳಿದ್ದಾರೆಯೇ ಹೊರತು ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ವಿರೋಧಿಸಿಲ್ಲ ಎಂದು ವಿವರಿಸಿದರು.

ಸಹಕಾರ ಸಂಘಗಳಿಗೆ ಒಂದು ವೇಳೆ ನಾಮನಿರ್ದೇಶನ ಮಾಡಬೇಕಾಗಿದ್ದಲ್ಲಿ ಸ್ಥಳೀಯರನ್ನೇ ಮಾಡಲಿ. ಬದಲಾಗಿ ಹೊರಗಿನವರನ್ನು ತರುವುದರಿಂದ ಮೀಸಲು ಸ್ಥಾನದಿಂದ ಆಯ್ಕೆಯಾದವರೂ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿದಂತಾಗುತ್ತದೆ ಎಂಬುದು ಜಿ.ಟಿ.ದೇವೇಗೌಡರ ಅಭಿಪ್ರಾಯ. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ಅವರನ್ನು ಮೀಸಲಾತಿ ವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ ಎಂದು ವಿವರಿಸಿದರು.

ಮುಖಂಡರಾದ ಮೋಹನ್‌ಕುಮಾರ್, ಚಂದ್ರಶೇಖರ್, ಶಿವಕುಮಾರ್, ಬಸವಲಿಂಗಯ್ಯ, ಎಂ.ಪಿ.ನಾಗರಾಜ್, ಉಮಾಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net