ಹಾವೇರಿಗೆ ವಿಜಯ ಸಂಕಲ್ಪ ಯಾತ್ರೆ ಇಂದು: ಶಾಸಕ ಓಲೇಕಾರ

MLA Neharu Neharu 2
Published on

ಹಾವೇರಿ: ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆ ಮಾ.18ರಂದು ಮಧ್ಯಾಹ್ನ 3 ಗಂಟೆಗೆ ಹಾವೇರಿಗೆ ಆಗಮಿಸಲಿದ್ದು, ನಗರದಲ್ಲಿ ರೋಡ್ ಶೋ ನಂತರ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 3 ಗಂಟೆಗೆ ಪುರಸಿದ್ದೇಶ್ವರ ದೇವಸ್ಥಾನದಿಂದ ವಾದ್ಯ ವೃಂದಗಳೊಂದಿಗೆ ಮೆರವಣಿಗೆ ಹೊರಡಲಿದೆ. ಎಂಜಿ ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗವಾಗಿ ಕೆಇಬಿ ವೃತ್ತದಲ್ಲಿ ಅಂತ್ಯಗೊಳ್ಳಲಿದೆ. ಕೆಇಬಿ ವೃತ್ತದಲ್ಲಿ ಸಂಜೆ 5.30ಕ್ಕೆ ಬಹಿರಂಗ ಭಾಷಣ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮತ್ತಿತರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶಹರ ಘಟಕದ ಅಧ್ಯಕ್ಷ ಗಿರೀಶ ತುಪ್ಪದ, ಬಸವರಾಜ ಕಳಸೂರು, ಕೆ.ಸಿ.ಕೋರಿ, ಈರಣ್ಣ ಸಂಗೂರ, ಇತರರಿದ್ದರು.
ಕಾಂಗ್ರೆಸ್ ವಾರಂಟಿ ಮುಗಿದಿದೆ
ವಾರಂಟಿ ಮುಗಿದಿರುವ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ. ಅಧಿಕಾರದಲ್ಲಿದ್ದಾಗ ಮನೆ ಕೊಡುತ್ತೇವೆ, ರಸ್ತೆ, ನೀರು ಒದಗಿಸುತ್ತೇವೆ ಎಂದು ಹುಸಿ ಬಾಂಬ್ ಹಾಕುತ್ತಿದ್ದವರು ಈಗ ಮತ್ತೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಓಲೇಕಾರ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net