ಸಿ.ಟಿ.ರವಿ ವಿರುದ್ದ ನರೇಂದ್ರಸ್ವಾಮಿ ದೂರು: ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಕೆ ಆರೋಪ

MLA Narendraswamy complaint against CT Ravi mandya
Published on

ಮಂಡ್ಯ: ಕೆರಗೋಡು ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಹಾರಿಸಿರುವ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜವೆಂದು ನಿಂದನೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ದೂರು ನೀಡಿದ್ದಾರೆ.

ನಗರದಲ್ಲಿ ಜಿಲ್ಲಾ ಪೊಲೀಸ್ ಭವನಕ್ಕೆ ಮಂಗಳವಾರ ಭೇಟಿ ನೀಡಿದ ನರೇಂದ್ರಸ್ವಾಮಿ, ವರಿಷ್ಠಾಧಿಕಾರಿ ಎನ್.ಯತೀಶ್‌ಗೆ ದೂರು ಸಲ್ಲಿಸಿದರು. ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜವೆಂದು ನಿಂದನೆ ಮಾಡಿ ರಾಷ್ಟ್ರ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಸೆಕ್ಷನ್ 51(ಎ) ಅನ್ವಯ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನರೇಂದ್ರಸ್ವಾಮಿ, ರಾಷ್ಟ್ರ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದರಿಂದ ಭಾರತದ ಪ್ರಜೆಯಾಗಿ ದೂರು ಸಲ್ಲಿಸಿದ್ದೇನೆ. ಅದರಂತೆ ಪೊಲೀಸರು ಸೂಕ್ತ ಕ್ರಮ ವಹಿಸಲು ಮುಂದಾಗಬೇಕು. ಸಿ.ಟಿ.ರವಿಗೆ ಬುದ್ಧಿ ಭ್ರಮಣೆಯಾಗಿದೆ. ಸಂವಿಧಾನಬದ್ಧವಾಗಿ ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆಂದು ಪ್ರಮಾಣವಚನ ಸ್ವೀಕರಿಸಿ ಸಚಿವರಾಗಿದ್ದ ಅವರು ಮಾನಸಿಕವಾಗಿ ವಿಚಲಿತರಾಗಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ. ಗುಂಡಿಗೆ ಎದೆಯೊಡ್ಡಿ ಪ್ರಾಣತ್ಯಾಗ ಮಾಡಿದ್ದಾರೆ. ಬಿಜೆಪಿಯವರು ಯಾವ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ. ಎಂದಿಗೂ ಭಾಗಿಯಾಗದ ಬಿಜೆಪಿಗರು ಬ್ರಿಟಿಷರಿಗೆ ಹೆದರಿ ವೇತನ ಪಡೆದಿದ್ದಾರೆ. ಸುಮ್ಮನೆ ದೇಶ ಭಕ್ತರು ಎಂದು ಬೊಬ್ಬೆ ಹಾಕುತ್ತಾರೆ. ದೇಶವನ್ನು ಶೂನ್ಯದ ಪರಿಸ್ಥಿತಿಯಿಂದ ಅಭಿವೃದ್ಧಿ ಪಥದತ್ತ ಕಾಂಗ್ರೆಸ್ ತೆಗೆದುಕೊಂಡು ಹೋಗಿದೆ. ನೀರಾವರಿ, ಸಾರಿಗೆ ಸೇರಿದಂತೆ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸಿದೆ. ಬಡಜನರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net