

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಹೆಸರಿನಲ್ಲಿ ಅಮಾಯಕರಿಂದ ಹಣವನ್ನು ಸುಲಿಗೆ ಮಾಡಲು ಯತ್ನಿಸಿದ ಮತ್ತು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ರಾಜೀವ್ ನಗರದ ಮುದಾಸೀರ್ ಪಾಷಾ (39) ಬಂಧಿತ. ಕಾರು ಚಾಲಕನಾಗಿದ್ದ ಆರೋಪಿ, ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಶಾಸಕರ ಆಪ್ತ ಕಾರ್ಯದರ್ಶಿ ಎಂಬುದಾಗಿ ಹೇಳಿ ಹಣವನ್ನು ವಸೂಲಿ ಮಾಡುತ್ತಿದ್ದ. ಇದಕ್ಕೆ ಪ್ರತಿಯಾಗಿ ಆರ್ಥಿಕ ನೆರವನ್ನು ಕೊಡಿಸುವ ಭರವಸೆ ನೀಡುತ್ತಿದ್ದ. ಇದನ್ನು ನಂಬಿ ಭದ್ರಾವತಿ ಮೂಲದವರು 10 ಸಾವಿರ ರೂ, ಮತ್ತೊಬ್ಬರು 5 ಸಾವಿರ ರೂಗಳನ್ನು ಆರೋಪಿ ತಿಳಿಸಿದ ಮೊ.ಸಂಖ್ಯೆಗೆ ಫೋನ್ ಪೇ ಮೂಲಕ ಕಳುಹಿಸಿದ್ದಾರೆ.
* ಹಲವರ ಹೆಸರಿನಲ್ಲಿ ವಂಚನೆ
ಪ್ರದೀಪ್ ಈಶ್ವರ್ ಮಾತ್ರವಲ್ಲದೇ ಸಚಿವ ಜಮೀರ್ ಅಹಮದ್, ಗಾಯಕ ಸೋನು ಸೂದ್, ಉದ್ಯಮಿ ಕೆಜಿಎಫ್ ಬಾಬು ಸೇರಿದಂತೆ ಹಲವರ ಹೆಸರಿನಲ್ಲಿ ಆರೋಪಿ ಹಣವನ್ನು ಪಡೆದುಕೊಂಡು, ವಂಚಿಸಿರುವ ಆರೋಪಗಳು ಕೇಳಿ ಬಂದಿವೆ. ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಸಿದ ನಕಲಿ ಖಾತೆಗಳ ಮೂಲಕ ಅಮಾಯಕರ ಗಮನ ಸೆಳೆದು, ಪ್ರಭಾವಿಗಳಿಂದ ನೆರವು ಕೊಡಿಸುವ ಮಾತುಗಳಲ್ಲಿ ವಂಚಿಸುವ ದಂಧೆಯಲ್ಲಿ ತೊಡಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.