

ಮೈಸೂರು: ನಗರದ ವಾರ್ಡ್ ಸಂಖ್ಯೆ 3ರ ವ್ಯಾಪ್ತಿಯ ತ್ರಿನೇತ್ರ ವೃತ್ತದಿಂದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ವೃತ್ತದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಬುಧವಾರ ಶಾಸಕ ಎಲ್.ನಾಗೇಂದ್ರ ಪರಿಶೀಲಿಸಿದರು.
ಇದೊಂದು ಮುಖ್ಯ ರಸ್ತೆಯಾಗಿದ್ದು, ಯಾವುದೇ ಲೋಪ ಆಗದ ರೀತಿ ಕಾಮಗಾರಿ ಪೂರ್ಣಗೊಳಿಸಬೇಕು. ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ 3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ, ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣದ ಕಾಮಗಾರಿ ಮಾಡಲಾಗುತ್ತಿದೆ. ಸ್ಥಳೀಯ ಪಾಲಿಕೆ ಸದಸ್ಯರೊಬ್ಬರು ಸದರಿ ಕಾಮಗಾರಿಯ ಗುಣಮಟ್ಟದ ಬಗ್ಗೆ ದೂರಿದ್ದರು. ಹಾಗಾಗಿ, ಕಾಮಗಾರಿ ಪರಿಶೀಲಿಸಿದ್ದೇನೆ. ಗುಣಮಟ್ಟದ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನೂ ಕಾಮಗಾರಿ ನಡೆಯುತ್ತಿದೆ. ಇನ್ನೂ ಅಪಾರ ಕೆಲಸ ಬಾಕಿ ಉಳಿದಿದೆ. ಈಗಲೇ ಗುಣಮಟ್ಟದ ಬಗ್ಗೆ ಮಾತನಾಡಲು ಆಗುವುದಿಲ್ಲ ಎಂದರು.
ಸದರಿ ರಸ್ತೆಯಿಂದ ಹೆಬ್ಬಾಳು, ಕುಂಬಾರಕೊಪ್ಪಲು, ಜಯಲಕ್ಷ್ಮೀಪುರಂ, ವಿಜಯನಗರ, ಲಕ್ಷ್ಮೀಕಾಂತನಗರ, ಮೇಟಗಳ್ಳಿ, ಮಂಚೇಗೌಡನ ಕೊಪ್ಪಲು ಸೇರಿದಂತೆ ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದರು.
ಮುಡಾ ಎಸ್‌ಇ ಚನ್ನಕೇಶವ, ಎಇಇ ಶ್ರೀನಿವಾಸ್, ಎಇ ನಾಗರಾಜು ಇತರರಿದ್ದರು.