

ವಿಜಯವಾಣಿ ಸುದ್ದಿಜಾಲ ಧಾರವಾಡ
ನವಲಗುಂದ ಪಟ್ಟಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಸುರಿದ ಮಳೆ ಅಪಾರ ಹಾನಿಗೆ ಕಾರಣವಾಗಿದೆ. ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಎಸ್‌ಪಿ ಡಾ. ಗೋಪಾಲ ಬ್ಯಾಕೋಡ ಹಾಗೂ ಅಧಿಕಾರಿಗಳು ಹಾನಿಯಾದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಅತಿಯಾದ ಮಳೆಗೆ ಇಬ್ರಾಹಿಂಪುರ- ನವಲಗುಂದ ನಡುವಿನ 2 ಹಳ್ಳಗಳು ತುಂಬಿ ಹರಿದಿವೆ. ತಿರ್ಲಾಪುರ, ಯಮನೂರ, ಹಾಳಕುಸುಗಲ್, ಇಬ್ರಾಹಿಂಪೂರ ಹಾಗೂ ನವಲಗುಂದ ಪಟ್ಟಣದ ಕೆಲವೆಡೆ ಚರಂಡಿಗಳು ತುಂಬಿ ಮಳೆ ನೀರು ರಸ್ತೆ ಮೇಲೆ ಹರಿದಿದ್ದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಪಟ್ಟಣದ ಮಿನಿ ವಿಧಾನಸೌಧ ಮುಂಭಾಗದ ಚರಂಡಿ ತುಂಬಿ ರಸ್ತೆ ಮೇಲೆ ನೀರು ಹರಿದು ಪಕ್ಕದ ನೀರಾವರಿ ಕಾಲನಿಯ ಮನೆಗಳಿಗೆ ನೀರು ನುಗ್ಗಿತ್ತು. ವಸತಿ ಶಾಲೆಗಳಾದ ರಾಣಿ ಚೆನ್ನಮ್ಮ, ಡಿ. ದೇವರಾಜ ಅರಸು ಹಿಂದುಳಿದ ವರ್ಗದ ವಸತಿ ಶಾಲೆ, ಬಿಸಿಎಂ ಹಾಸ್ಟೆಲ್, ಎಲ್‌ಐಸಿ ಆಫೀಸ್, ಅಂಬೇಡ್ಕರ್‌ನಗರ, ಮಾಡೆಲ್ ಹೈಸ್ಕೂಲ್ ಹತ್ತಿರದ ಕುರಹಟ್ಟಿ ಪ್ಲಾಟ್, ಅಂಬೇಡ್ಕರನಗರ, ಬಸವೇಶ್ವರನಗರದ ಸರ್ಕಾರಿ ಶಾಲೆ ಹಾಗೂ ಹಾದಿ ಬಸವೇಶ್ವರ ದೇವಸ್ಥಾನದ ರಸ್ತೆಯು ಜಲಾವೃತಗೊಂಡಿತ್ತು.
ಮಳೆಗೆ ಸಿಲುಕಿ ತೊಂದರೆ ಅನುಭವಿಸಿದ ಇಬ್ರಾಹಿಂಪುರ ರಸ್ತೆ ಹಳ್ಳದ ಹತ್ತಿರದ ಎಸ್.ಎಸ್. ಬಾಗಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳನ್ನು ಭೇಟಿ ಮಾಡಿ ಧೈರ್ಯ ತುಂಬಿದರು.
ಪ್ರತಿ ಬಾರಿ ಮಳೆಯಾದಾಗ ಈ ಶಾಲೆಯ ಮಕ್ಕಳು, ಇಬ್ರಾಹಿಂಪುರ ಗ್ರಾಮಸ್ಥರು ಹಾಗೂ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು. ಎರಡೂ ಹಳ್ಳಗಳಿಗೆ ಸೇತುವೆ ನಿರ್ಮಿಸಿ ಎಂದು ಜನಪ್ರತಿನಿಽಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಶಾಸಕರು ಮುತುವರ್ಜಿ ವಹಿಸಿ ಹಳ್ಳಗಳಿಂದಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ವಿನಂತಿಸಿದರು.
ತಹಸೀಲ್ದಾರ ಸುಧೀರ ಸಾಹುಕಾರ, ಪುರಸಭೆ ಮುಖ್ಯಾಽಕಾರಿ ಶರಣು ಪೂಜಾರ, ಸಿಪಿಐ ರವಿಕುಮಾರ ಕಪ್ಪತನ್ನವರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ ಹಾಗೂ ಸದಸ್ಯರು ಇದ್ದರು.