ಶೀಘ್ರವೇ ಮಂಡ್ಯ ಜಿಲ್ಲೆಗೆ ಆಗಮಿಸಲಿರುವ ಬರಾಕ್ ಒಬಾಮಾ: ಸ್ಥಳ ಪರಿಶೀಲನೆ ನಡೆಸಿದ ಶಾಸಕ, ಎಂಎಲ್‌ಸಿ

MLA, MLC visit Hallegere village mandya
Published on

ಮಂಡ್ಯ: ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರ ಶಂಕುಸ್ಥಾಪನೆಗೆ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಗಮನ ಹಿನ್ನೆಲೆಯಲ್ಲಿ ಶಾಸಕ ರವಿಕುಮಾರ್ ಗಣಿಗ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಲ್ಲೇಗೆರೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹೆಲಿಪ್ಯಾಡ್, ರಸ್ತೆ, ಚರಂಡಿ, ವಿದ್ಯುತ್ ದೀಪ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಸರ್ಕಾರದ ವತಿಯಿಂದ ಒದಗಿಸಿಕೊಡುವ ಬಗ್ಗೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿತು. ಅದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದರು.

ಅದರಂತೆ ಬರಾಕ್ ಒಬಾಮಾ ಆಗಮಿಸುತ್ತಿರುವುದರಿಂದ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸಲು ಶಾಸಕರು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪ್ರಮುಖವಾಗಿ ಮೊದಲ ಹಂತದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಹೆಲಿಪ್ಯಾಡ್ ನಿರ್ಮಾಣ ಕುರಿತು ಚರ್ಚೆ ನಡೆಸಿದರು. ಮೂರು ಕಡೆ ಹೆಲಿಪ್ಯಾಡ್ ನಿರ್ಮಾಣ ಹಾಗೂ ಕೋಟ್ಯಂತರ ರೂ ವೆಚ್ಚದಲ್ಲಿ ರಸ್ತೆ ದುರಸ್ತಿ ಮಾಡಲಾಗುತ್ತಿದೆ. ಹಲ್ಲೇಗೆರೆ ಗ್ರಾಮದಿಂದ ಸುಮಾರು ಮೂರು ಕಿ.ಮೀ ದೂರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈ ರಸ್ತೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನಹರಿಸಲಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕ ರವಿಕುಮಾರ್ ಗಣಿಗ ಸೂಚನೆ ನೀಡಿದರು. ಮಾತ್ರವಲ್ಲದೆ ಶೀಘ್ರವೇ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು ಎಂದು ತಿಳಿಸಿದರು.

ಇನ್ನು ಹಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಮಂಡ್ಯದಿಂದ ಹಲ್ಲೇಗೆರೆ ಮಾರ್ಗವಾಗಿ ಕೌಡ್ಲೆ ಗ್ರಾಮಕ್ಕೆ ಹೋಗುವ ರಸ್ತೆ ಕಾಮಗಾರಿಯೂ ವೇಗ ಪಡೆದುಕೊಂಡಿದೆ. ಮಂಡ್ಯ ನಗರದ ಕಾರಿಮನೆ ಗೇಟ್ ಬಳಿ ಕೆಲಸ ಪೂರ್ಣಗೊಂಡು ಚಿಕ್ಕಬಳ್ಳಿ ಗ್ರಾಮದ ಸಮೀಪವೂ ಬಹುತೇಕ ಅಂತಿಮ ಹಂತದಲ್ಲಿದೆ. ಉಳಿದಂತೆ ಹಲ್ಲೇಗೆರೆ ಗ್ರಾಮದಲ್ಲಿ ಕಾಮಗಾರಿ ಪ್ರಾರಂಭವಾಗಲಿದ್ದು, ಸುಮಾರು 20 ದಿನದೊಳಗೆ ಡಾಂಬರೀಕರಣವೂ ಪೂರ್ಣಗೊಳ್ಳಲಿದೆ.

ಅಮೆರಿಕಾದ ಅಕ್ಕ ಸಂಸ್ಥೆ ಮಾಜಿ ಅಧ್ಯಕ್ಷ ಶಿವಮೂರ್ತಿ ಕೀಲಾರ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಸೇರಿದಂತೆ ಕಾವೇರಿ ನೀರಾವರಿ ನಿಗಮ ಹಾಗೂ ಸೆಸ್ಕ್ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net