ಸಂಘಟನೆ ಮಾಡಿದವರಿಗಷ್ಟೇ ಅವಕಾಶ: ಶಾಸಕ ರವಿಕುಮಾರ್ ಗಣಿಗ ಸ್ಪಷ್ಟ ಸಂದೇಶ

MLA meeting with leaders and activists Mandya
Published on

ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆಗೆಂದು ತಯಾರಿ ಆರಂಭಿಸಿರುವ ಕಾಂಗ್ರೆಸ್, ಇದಕ್ಕೆ ಪೂರಕವಾಗಿ ಪಕ್ಷದ ಬಲವರ್ಧನೆಗೆ ಮುಂದಾಗಿದೆ. ಉಪಮುಖ್ಯಮಂತ್ರಿಯೂ ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ಪಕ್ಷದ ಅಭ್ಯರ್ಥಿಗಳೊಂದಿಗೆ ಸಭೆ ಆಯೋಜಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಪ್ರಥಮವಾಗಿ ಶಾಸಕ ರವಿಕುಮಾರ್ ಗಣಿಗ ಮಂಗಳವಾರ ಮುಖಂಡರು, ಕಾರ್ಯಕರ್ತರೊಂದಿಗೆ ಹಲವು ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆಸಿದರು.

ನಗರಸಭೆಗೆ ಪಕ್ಷದಿಂದ ಆಯ್ಕೆಯಾದ ಹಾಗೂ ಪರಾಜಿತರಾದ ಸದಸ್ಯರೊಂದಿಗೆ ನಗರದ ಗುತ್ತಲು ಬಡಾವಣೆಯ ಖಾಸಗಿ ಸಮುದಾಯ ಭವನದಲ್ಲಿ ಸಭೆ ಆಯೋಜಿಸಲಾಗಿತ್ತು. ಅಧ್ಯಕ್ಷತೆ ವಹಿಸಿ ಮಾತನಾಡಿದ ರವಿಕುಮಾರ್ ಗಣಿಗ, ರಾಜ್ಯಸರ್ಕಾರದ ಜನಪ್ರಿಯ ಕಾರ್ಯಕ್ರಮದ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಮುಖ್ಯವಾಗಿ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಅದನ್ನು ಬಿಟ್ಟು ನಾಯಕರ ಹಿಂದೆ ಓಡಾಡಿಕೊಂಡಿದ್ದ ಮಾತ್ರಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದರು.

ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿಸಬೇಕೆನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಲಹೆ ಮೇರೆಗೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಇದರೊಂದಿಗೆ ಪಕ್ಷ ಬಲಪಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ಸಾರ್ವಜನಿಕರ ಅಹವಾಲಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಮಾತ್ರವಲ್ಲದೆ ಜನಪರ ಯೋಜನೆಗಳನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಅರ್ಹರಿಗೆ ತಲುಪುತ್ತಿದೆಯೇ ಅಥವಾ ಅಸಹಾಯಕರಿಗೆ ಯಾವ ರೀತಿಯಲ್ಲಿ ಗ್ಯಾರಂಟಿ ಯೋಜನೆ ಲಾಭ ದೊರಕಿಸಿಕೊಡಬೇಕೆಂಬ ನಿಟ್ಟಿನಲ್ಲಿ ಪರಾಮರ್ಶೆ ನಡೆಸಬೇಕು. ಸಾರ್ವಜನಿಕರ ಬಹಳ ವರ್ಷದ ಬೇಡಿಕೆಯಾಗಿದ್ದ ಬಿ ಖಾತಾ ಆಂದೋಲನವನ್ನು ರಾಜ್ಯಸರ್ಕಾರ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಅದರಂತೆ ಮಂಡ್ಯ ನಗರ ವ್ಯಾಪ್ತಿಯ 35 ವಾರ್ಡ್‌ನ ಪ್ರತಿ ಮನೆ, ಮನೆಗೆ ಜಾಗೃತಿ ಪತ್ರ ನೀಡುವ ಮೂಲಕ ಆಂದೋಲನ ಯಶಸ್ಸಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಮುಂಬರುವ ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಲು ಸಂಕಲ್ಪ ಮಾಡುವ ಉದ್ದೇಶದಿಂದ ಸಂಘಟನೆ ಬಲಗೊಳಿಸಬೇಕು. ಸ್ಥಳೀಯ ಜನರೊಟ್ಟಿಗೆ ಸಂಘಟನೆಯಲ್ಲಿ ತೊಡಗಿರುವ ಜನಾನೂರಾಗಿ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದು. ಅದನ್ನು ಹೊರತುಪಡಿಸಿ ಶಿಫಾರಸು ಅಥವಾ ನಾಯಕರ ಹಿಂದೆ ಓಡಾಡಿಕೊಂಡು ಇರುವವರಿಗೆ ಅವಕಾಶ ಕಲ್ಪಿಸುವುದಿಲ್ಲ. ಇದನ್ನು ಅರ್ಥೈಸಿಕೊಂಡು ಬೂತ್ ಮಟ್ಟದ ಸಂಘಟನೆಗೆ ಆದ್ಯತೆ ನೀಡಬೇಕು. ಮಂಡ್ಯ ನಗರ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ದಿ, ವೃತ್ತಗಳ ನವೀಕರಣ, ವಿದ್ಯುತ್ ದೀಪ ಅಳವಡಿಕೆ, ಒಳಾಂಗಣ ಕ್ರೀಡಾಂಗಣ ನಿರ್ಮಾಣ, ವಾರ್ಡ್‌ಗಳಿಗೆ ವಿಶೇಷ ಅನುದಾನ ಸೇರಿದಂತೆ ನಗರ ವ್ಯಾಪ್ತಿಯಲ್ಲಿ 183 ಕೋಟಿ ರೂ ವೆಚ್ಚದ ಕಾಮಗಾರಿ, ವಿವಿಧ ಇಲಾಖೆಯಲ್ಲಿ ಸಲಕರಣೆ ವಿತರಣೆ ಸೇರಿದಂತೆ ಪ್ರಮುಖ ಅಭಿವೃದ್ದಿ ಕೆಲಸ ನಡೆಯುತ್ತಿದೆ. ಇದನ್ನು ಜನರಿಗೆ ತಿಳಿಸುವುದರ ಮೂಲಕ ಪಕ್ಷವನ್ನು ಬಲಗೊಳಿಸುವಂತೆ ಶಾಸಕರು ತಿಳಿಸಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್, ಮುಡಾ ಅಧ್ಯಕ್ಷ ನಹೀಂ, ಮುಖಂಡರಾದ ಶಿವನಂಜು, ಚಿದಂಬರ್, ಗುರು, ಶ್ರೀಧರ್, ಮಹಾಲಿಂಗು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net