‘ಬಸ್ ಬೇ’ಗಳಿಗೆ ಬಾರದಿದ್ದರೆ ಚಾಲಕರ ವಿರುದ್ಧ ಕೇಸ್: ಶಾಸಕ ರವಿಕುಮಾರ್ ಗಣಿಗ ಎಚ್ಚರಿಕೆ

MLA meeting on Mandya city traffic system
Published on

ಮಂಡ್ಯ: ಮಂಡ್ಯ ನಗರದಲ್ಲಿ ಸರ್ಕಾರಿ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅನುಕೂಲವಾಗುವಂತೆ ಬಸ್ ಬೇ ನಿರ್ಮಿಸಲಾಗಿದೆ. ಆದರೆ ಈ ಸ್ಥಳ ಬಿಟ್ಟು ರಸ್ತೆಯಲ್ಲಿಯೇ ನಿಲ್ಲಿಸುವ ಪರಿಪಾಠವಿದ್ದು, ಇದೇ ರೀತಿ ನಿಯಮ ಮೀರಿದರೆ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಆಯೋಜಿಸಿದ್ದ ‘ಮಂಡ್ಯ ನಗರದ ಸುಗಮ ಸಂಚಾರ ವ್ಯವಸ್ಥೆ ಕುರಿತ’ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸ್ ಬೇ ಬಾರದೇ ರಸ್ತೆಯಲ್ಲಿ ನಿಲ್ಲಿಸುವುದರಿಂದ ಸಂಚಾರ ದಟ್ಟಣೆಯಾಗುತ್ತಿದೆ. ಈ ರೀತಿ ಎಲ್ಲೆಂದರಲ್ಲಿ ನಿಯಮಬಾಹಿರವಾಗಿ ನಿಲ್ಲಿಸುವುದು ಸರಿಯಲ್ಲ. ಆದ್ದರಿಂದ ಎಲ್ಲ ಚಾಲಕರಿಗೂ ಮೊದಲ ಎಚ್ಚರಿಕೆ ನೀಡಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕ್ರಮವಾಗಲಿದೆ. ಈ ಸಂಬಂಧ ಗಮನಹರಿಸುವಂತೆ ಕೆಎಸ್‌ಆರ್‌ಟಿಸಿ ಹಾಗೂ ಪೊಲೀಸರಿಗೆ ಸೂಚನೆ ನೀಡಿದರು.

ಸಾರ್ವಜನಿಕರ ಹಿತದೃಷ್ಠಿಯಿಂದ ನಗರದೊಳಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಲು ಹಲವು ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹದಗೆಟ್ಟಿರುವ ಸಂಚಾರದ ವ್ಯವಸ್ಥೆಯನ್ನು ಸುಸ್ಥಿತಿಗೆ ತರುವುದಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವುದು ಅನಿವಾರ್ಯ. ಅದರಂತೆ ಗೌರಿಶಂಕರ ಕಲ್ಯಾಣ ಮಂಟಪದಿಂದ ಬೆಸಗರಹಳ್ಳಿ ರಾಮಣ್ಣ ವೃತ್ತದವರೆಗೆ 2.20 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಇದರ ಮಧ್ಯೆ ಕನ್ನಿಕಾ ಪರಮೇಶ್ವರಿ ದೇವಾಲಯದ ವೃತ್ತ, ಹೊಸಹಳ್ಳಿ ವೃತ್ತ, ಬೆಸಗರಹಳ್ಳಿ ರಾಮಣ್ಣ ವೃತ್ತವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ಜತೆಗೆ ರಸ್ತೆಯಲ್ಲಿ ಪುಟ್‌ಪಾತ್ ಒತ್ತುವರಿ ತೆರವುಗೊಳಿಸಿ ಬಸ್ ಬೇಗಳನ್ನು ನಿರ್ಮಿಸಲಾಗುವುದು ಎಂದು ವಿವರಿಸಿದರು.

ಹೆಲ್ಮೆಟ್ ಹಾಕದಿದ್ದರೆ ವಾಹನ ವಶ: ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುವುದಿಲ್ಲ. ಬದಲಿಗೆ ಅವರು ಹೆಲ್ಮೆಟ್ ಖರೀದಿಸುವವರೆಗೆ ವಾಹನವನ್ನು ವಶದಲ್ಲಿಟ್ಟುಕೊಳ್ಳಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೆಲ್ಮೆಟ್ ಬಗ್ಗೆ ಜಾಗೃತಿಯನ್ನು ಹಲವಾರು ವರ್ಷಗಳಿಂದ ಮೂಡಿಸಲಾಗಿದೆ. ಇನ್ನು ಮುಂದೆ ಹೆಲ್ಮೆಟ್ ಧರಿಸದೆ ಸಂಚರಿಸಿದಲ್ಲಿ ದಂಡ ವಿಧಿಸದೆ ಹೆಲ್ಮೆಟ್ ಖರೀದಿಸುವವರೆಗೆ ವಾಹನವನ್ನು ವಶದಲ್ಲಿಟ್ಟುಕೊಳ್ಳಲಾಗುವುದು. ಸಾರ್ವಜನಿಕರ ಸುರಕ್ಷತೆ ದೃಷ್ಠಿಯಿಂದ ಎಲ್ಲರೂ ಹೆಲ್ಮೆಟ್ ಧರಿಸಬೇಕು. ಯಾವುದೇ ಶಿಫಾರಸುಗಳಿಗೂ ಮಣಿಯುವುದಿಲ್ಲ. ಅಂತೆಯೇ ಕಾರಿನ ಸೀಟ್ ಬೆಲ್ಟ್ ಹಾಕದವರಿಗೆ ಆರಂಭದಲ್ಲಿ ಎಚ್ಚರಿಕೆ ನೀಡಲಾಗುವುದು. ಅವರಿಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ. ಕುಟುಂಬದವರು ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಕಾರನ್ನು ನಿಲ್ಲಿಸಿ, ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ನಗರದೊಳಗೆ ಪ್ರಸ್ತುತ 16 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ. ಅವುಗಳನ್ನು ಇತ್ತೀಚಿನವರೆಗೂ ನಿರ್ವಹಣೆ ಮಾಡಲಾಗುತ್ತಿತ್ತು. ಈ ಪೈಕಿ ಕೆಲವನ್ನು ನಿರ್ವಹಣೆ ಮಾಡಿಲ್ಲ. ಇನ್ನು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದರ ಮೂಲಕ ಅಪರಾಧಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಸಿಸಿಟಿವಿ ಕ್ಯಾಮೆರಾ ನಿರ್ವಹಣೆಯನ್ನು ಪೊಲೀಸ್ ಇಲಾಖೆ ಮತ್ತು ನಗರಸಭೆ ಮಾಡಲಿವೆ ಎಂದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಡಿವೈಎಸ್ಪಿ ಶಿವಮೂರ್ತಿ, ಪೌರಾಯುಕ್ತ ಮಂಜುನಾಥ್, ಸಂಚಾರ ಪೊಲೀಸರು, ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net