ರಸ್ತೆ ಕಾಮಗಾರಿ ಶ್ರೀಘ್ರ ಪೂರ್ಣಗೊಳಿಸಿ, ಶಾಸಕ ಮಹೇಶ ಟೆಂಗಿನಕಾಯಿ ಸೂಚನೆ

IMG-20231220-WA0009.jpg
Published on

ಹುಬ್ಬಳ್ಳಿ: ಎಲ್ ಆ್ಯಂಡ್ ಟಿ ಕಂಪನಿಯವರು ಕಾಮಗಾರಿಯನ್ನು ಪೂರ್ತಿ ಮಾಡದೇ ಕಾಲಹರಣ ಮಾಡುತ್ತಿದ್ದಾರೆ. ಅವರು ಅಗೆದ ರಸ್ತೆಗಳನ್ನು ಹಾಗೇ ಬಿಡುತ್ತಿದ್ದಾರೆ. ಈಗಾಗಲೇ ಹಲವು ಸಭೆಗಳನ್ನು ಮಾಡಿ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಕ್ರೀಟ್ ರಸ್ತೆಗಳು, ಒಳಚರಂಡಿ ಹಾಗೂ ಎಲ್ ಆ್ಯಂಡ್ ಟಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದು 5ನೇ ಪ್ರಗತಿ ಪರಿಶೀಲನಾ ಸಭೆಯಾಗಿದೆ. ಕಳೆದ ಬಾರಿ ಅಧಿಕಾರಿಗಳು ಹೇಳಿದ ಹಾಗೆ ಯಾವುದೇ ಕೆಲಸಗಳು ರ್ಪೂಣಗೊಂಡಿಲ್ಲ. ಎಲ್ಎನ್ಟಿ ಕಂಪನಿಯವರು ಅಗೆದ ಗುಂಡಿಗಳನ್ನು ಸಮರ್ಪಕವಾಗಿ ಉಸುಕು ತುಂಬಿ ಮುಚ್ಚಬೇಕು. ಇಲ್ಲದಿದ್ದರೆ ರಸ್ತೆ ಮಾಡಿದ ನಂತರ ಕುಸಿಯಲಿದೆ. ಕಳಪೆ ಕಾಮಗಾರಿಯಿಂದ ಸಮಸ್ಯೆ ಉಂಟಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಅಶೋಕನಗರ ಸೇತುವೆಯಿಂದ ನೃಪತುಂಗ ಬೆಟ್ಟದ ಹತ್ತಿರ ಹಾದು ಹೋಗುವ ರಸ್ತೆ ಇನ್ನೂ ಆಗಿಲ್ಲ. ಎಷ್ಟು ದಿನ ಸಮಸ್ಯೆಯಲ್ಲಿ ಓಡಾಡಬೇಕು ಎಂದು ಅಲ್ಲಿನ ಜನರು ಪ್ರಶ್ನಿಸುತ್ತಿದ್ದಾರೆ. ನಿತ್ಯ ಧೂಳಿನಲ್ಲಿ ಸಂಚರಿಸುತ್ತಿರುವುದರಿಂದ ಆರೋಗ್ಯ ಸಮಸ್ಯೆ ಕಾಡುತ್ತಿವೆ. ಸಾರ್ವಜನಿಕರ ಪ್ರಶ್ನೆಗೆ ಏನು ಉತ್ತರ ನೀಡಬೇಕು? ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿವಿಧ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆಯಿಂದ ಈ ರೀತಿ ಆಗುತ್ತಿದೆ. ಹಲವು ಕಾಮಗಾರಿಗಳು ಬಹಳಷ್ಟು ವಿಳಂಬವಾಗುತ್ತಿವೆ. ತಡ ಮಾಡದೇ ಎಲ್ಲ ಕಡೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆರ್ ಎನ್ ಶೆಟ್ಟಿ ರಸ್ತೆ: ಹಳೇಹುಬ್ಬಳ್ಳಿ ಸಿದ್ಧಾರೂಢಮಠ - ಗೋಕುಲ ರಸ್ತೆ ಸಂಪರ್ಕಿಸುವ ಆರ್.ಎನ್. ಶೆಟ್ಟಿ ರಸ್ತೆ ಅಗಲೀಕರಣಕ್ಕೆ ಇರುವ ಸಮಸ್ಯೆಗಳನ್ನು ಶಾಸಕರು ಚಚಿರ್ಸಿದರು. ಸಿದ್ಧಾರೂಢಮಠ ದ್ವಾರದವರೆಗಿನ ರಸ್ತೆಯಲ್ಲಿನ ಆರ್.ಎನ್. ಶೆಟ್ಟಿ ಫ್ಯಾಕ್ಟರಿ ಇರುವ ಜಾಗ ಲೀಜ್ ಎಂದು ಅಧಿಕಾರಿಗಳ ಮಾಹಿತಿಯಿಂದ ಗೊತ್ತಾಗಿದೆ. ಈ ರಸ್ತೆ ಅಗಲೀಕರಣಕ್ಕೆ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ. ಅಗತ್ಯ ಇರುವ ಭೂಮಿ ವಶಪಡಿಸಿಕೊಂಡು ಪರಿಹಾರ ನೀಡಬೇಕು. ಆದಷ್ಟು ಶ್ರೀ ರಸ್ತೆ ಅಗಲೀಕರಣ ಹಾಗೂ ಸುಧಾರಣೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಉಣಕಲ್ಲ ರಸ್ತೆ: ಇದೇ ರೀತಿ ಉಣಕಲ್ಲ ಸಾಯಿನಗರ ರಸ್ತೆಯಿಂದ ಚರ್ಚವರೆಗಿನ ರಸ್ತೆ ಅಭಿವೃದ್ಧಿಯ ಸಮಸ್ಯೆಗಳನ್ನು ಚಚಿರ್ಸಿದ ಶಾಸಕ ಟೆಂಗಿನಕಾಯಿ ಅವರು, ಏನೇ ತೊಂದರೆ ಇದ್ದರೂ ಬೇಗ ಇತ್ಯರ್ಥಗೊಳಿಸಬೇಕು. ಮಹಾನಗರ ಪಾಲಿಕೆ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ನಗರದಲ್ಲಿ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿಯು ಇತರೆ ಕೆಲಸಗಳಿಗೆ ಅಡ್ಡಿಯಾಗಿದೆ. ಜನರು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಪ್ಲೈಓವರ್ ಕಾಮಗಾರಿಯು ಸಹ ಬೇಗ ರ್ಪೂಣಗೊಳಿಸಲು ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು. ಗೋಕುಲ ರಸ್ತೆ ಬಳಿಯ ತತ್ವದರ್ಶ ಆಸ್ಪತ್ರೆ ಎದುರಿನ ರಸ್ತೆ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.

ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಅಧಿಕಾರಿಗಳ ವಿಳಂಬ ನೀತಿಯನ್ನು ಸಹಿಸುವುದಿಲ್ಲ. ಈಗಾಗಲೇ ಮುಗಿಯಬೇಕಿದ್ದ ಕಾಮಗಾರಿಗಳು ಇನ್ನೂ ಹಾಗೇ ಇವೆ. ಅಧಿಕಾರಿಗಳು ಒಬ್ಬರ ಮೇಲೊಬ್ಬರು ಬೆರಳು ತೋರಿಸುವುದನ್ನು ಬಿಡಬೇಕು. ನಿಮಗೆ ಅಧಿಕಾರ ನೀಡಲಾಗಿದೆ. ಆದರೂ, ಅನಗತ್ಯ ಕಾರಣಗಳನ್ನು ನೀಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಕಿ ಕಾಮಗಾರಿಗಳನ್ನು ವಿಳಂಬ ಮಾಡದೇ ಬೇಗ ಮುಗಿಸಬೇಕೆಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಆರ್.ಎನ್. ಶೆಟ್ಟಿ ರಸ್ತೆ ಅಗಲೀಕರಣಕ್ಕೆ ಜಿಲ್ಲಾಧಿಕಾರಿ ಸಹಮತ ವ್ಯಕ್ತಪಡಿಸಿದರು.

ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ರಾಜಣ್ಣ ಕೊರವಿ, ಸಂತೋಷ ಚವ್ಹಾಣ, ಸೀಮಾ ಸಿದ್ದು ಮೊಗಲಿಶೆಟ್ಟರ, ಮೀನಾ ವಂಟಮೂರಿ, ಮುಖಂಡ ಸಿದ್ದು ಮೊಗಲಿಶೆಟ್ಟರ, ಪಾಲಿಕೆ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಎಲ್ಎನ್ಟಿ ಕಂಪನಿ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net