

ಮಂಡ್ಯ: ನಗರದ ಸ್ಲಂನಲ್ಲಿ ವಾಸವಿರುವ ಅರ್ಹರಿಗೆ ಹಕ್ಕುಪತ್ರ ವಿತರಿಸುವ ಸಂಬಂಧಿಸಿದಂತೆ ತುರ್ತು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ರವಿಕುಮಾರ್ ಗಣಿಗ ಸೂಚನೆ ನೀಡಿದರು.
ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರಸಭೆ ಕಚೇರಿಯ ಧರಣಪ್ಪ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇನ್ನು ಹದಿನೈದು ದಿನದೊಳಗೆ ಅರ್ಹ ಫಲಾನುಭವಿಗಳ ಪಟ್ಟಿ ಹಾಗೂ ಅವರು ಒದಗಿಸಬೇಕಿರುವ ದಾಖಲೆ ಜತೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಕೊಡಬೇಕು. ಅಂತೆಯೇ ತ್ವರಿತವಾಗಿ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸ್ಲಂ ಬೋರ್ಡ್ ಎಇ ನಾಗೇಂದ್ರ ಮಾತನಾಡಿ, ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ಸಿದ್ಧಪಡಿಸಲಾಗಿದೆ. ಮುಂದಿನ ಕ್ರಮ ವಹಿಸಲಾಗುವುದು. ಆರ್‌ಟಿಒ ಎದುರಿನ ಸ್ಲಂನಲ್ಲಿ ಹೈಟೆನ್ಷನ್ ವೈಯರ್ ಹೋಗಿರುವುದರಿಂದ ಹಕ್ಕುಪತ್ರ ವಿತರಣೆಗೆ ಸಮಸ್ಯೆಯಾಗಿದೆ ಎಂದರು. ಶಾಸಕರು ಪ್ರತಿಕ್ರಿಯಿಸಿ, ಇಂತಹ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಬಗೆಹರಿಸಬೇಕು. ಸಧ್ಯಕ್ಕೆ ವೈಯರ್ ಸಮಸ್ಯೆ ಇಲ್ಲದವರಿಗೆ ಹಕ್ಕುಪತ್ರ ವಿತರಿಸುವುದರ ಜತೆಗೆ ಉಳಿದವರಿಗೆ ಏನು ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಯೋಜನೆ ರೂಪಿಸಬೇಕು. ಅಂತೆಯೇ ಮಿಮ್ಸ್ ಪಕ್ಕದ ಸ್ಲಂ ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸೋಣ ಎಂದು ಸಲಹೆ ನೀಡಿದರು.
ಇನ್ನು ಸ್ಲಂ ಬೋರ್ಡ್‌ನಿಂದ ನಿರ್ಮಿಸಿರುವ ಮನೆಗಳಿಗೆ ಸಂಬಂಧಿಸಿದಂತೆ ಕೆಲವರು ನಿಯಮ ಉಲ್ಲಂಘಿಸಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆಂದು ಸೆಸ್ಕ್ ಅಧಿಕಾರಿಗಳು ಸಂಪರ್ಕ ಕಡಿತಕ್ಕೆ ಮುಂದಾಗಿದ್ದಾರೆ. ಆದರೆ ನಿವಾಸಿಗಳು ಮೀಟರ್ ಬೋರ್ಡ್‌ಗೆ ನಾವು ಹಣ ಕೊಟ್ಟಿದ್ದೇವೆಂದು ಹೇಳುತ್ತಿದ್ದಾರೆ ಎಂದಾಗ ಪ್ರತಿಕ್ರಿಯಿಸಿದ ನಾಗೇಂದ್ರ, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಹಣ ಪಡೆದಿದ್ದಾರೆಂದರು. ರವಿಕುಮಾರ್ ಪ್ರತಿಕ್ರಿಯಿಸಿ, ಹಾಗಾದರೆ ನಿವಾಸಿಗಳು ಹಣ ಕೊಟ್ಟಿದ್ದಾರೆ. ಆದ್ದರಿಂದ ಅವರ ತಪ್ಪಲ್ಲ. ತ್ವರಿತವಾಗಿ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು. ನಮ್ಮ ಸರ್ಕಾರದಿಂದ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡಲಾಗುತ್ತಿದೆ. ಆ ಸೌಲಭ್ಯ ಅವರಿಗೆ ಸಿಗುವಂತಾಗಬೇಕು. ಜತೆಗೆ ಎಸ್.ಡಿ.ಜಯರಾಂ ಬಡಾವಣೆಯ ಸಮಸ್ಯೆ ತ್ವರಿತವಾಗಿ ಬಗೆಹರಿಸಬೇಕು. ಅಧಿಕಾರಿಗಳ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಎರಡೇ ದಿನ ಸಾಕು. ಜೂ.31ರೊಳಗೆ ಬಗೆಹರಿಸಿ ಮಾಹಿತಿ ಕೊಡುವಂತೆ ತಿಳಿಸಿದರು.
ಸೆಸ್ಕ್ ವಿರುದ್ಧವೇ ಹೆಚ್ಚು ದೂರು: ಬಿಜೆಪಿ ಸರ್ಕಾರವಿದ್ದಾಗ ಸೆಸ್ಕ್ ಅಧಿಕಾರಿಗಳು ಕೆಲಸ ಮಾಡದೇ ಜಡ್ಡು ಹಿಡಿದಿದ್ದಾರೆ. ಅದನ್ನು ನಮ್ಮ ಸರ್ಕಾರ ಸರಿಪಡಿಸಲಿದೆ. ಇನ್ನು ಸೆಸ್ಕ್ ವಿರುದ್ಧವೇ ಹೆಚ್ಚು ದೂರುಗಳು ಬರುತ್ತಿರುತ್ತವೆ. ನಗರದಲ್ಲಿ ಅಪಾಯ ತರುವಂತಹ ಕಂಬಗಳಿದ್ದರೆ ಕೂಡಲೇ ಬದಲಿಸಬೇಕು. ಅನಾವಶ್ಯಕವಾಗಿ ಸಂಪರ್ಕ ಕಡಿತಗೊಳಿಸಬಾರದು ಎಂದು ಸೆಸ್ಕ್ ಎಇಇ ಮಹದೇವ್‌ಗೆ ಶಾಸಕರು ಸೂಚನೆ ನೀಡಿದರು.
ಕೆಲಸ ಮಾಡದಿದ್ದರೆ ಓಡಾಡಲು ಬಿಡಲ್ಲ: ಸಭೆಯ ಪ್ರಾರಂಭದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕುರಿತು ಚರ್ಚೆ ನಡೆಸಿದ ಶಾಸಕರು, ಸಂಬಂಧಪಟ್ಟ ಅಧಿಕಾರಿ ಬಾರದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲದೆ ಪ್ರತಿ ಸಭೆಯಲ್ಲಿಯೂ ಇಂತಹ ಚಾಳಿ ಮುಂದುವರೆಸಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಮುಖವಾಗಿ ತಾಲೂಕಿನ ಹನಕೆರೆ ಗ್ರಾಮದ ಬಳಿ ಅಂಡರ್‌ಪಾಸ್ ನಿರ್ಮಾಣ, ನಗರದ ಬೀಡಿ ಕಾಲನಿ ಸಮೀಪ ಕಿರಿದಾದ ಚರಂಡಿ ಮಾಡಿರುವುದರಿಂದಾಗುತ್ತಿರುವ ಸಮಸ್ಯೆ ಹಾಗೂ ನಗರದೊಳಗೆ ಒನ್ ಟೈಂ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಶಾಸಕರ ಪ್ರಶ್ನೆಗೆ ಪ್ರಾಧಿಕಾರದ ಸಲಹೆಗಾರ ಉಮಾಪತಿ ಅವರಿಂದ ಸರಿಯಾದ ಉತ್ತರ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಂದ ಮಾಹಿತಿ ಪಡೆದು ಸಭೆಗೆ ತಿಳಿಸುವಂತೆ ಸೂಚನೆ ನೀಡಿದರು. ಕೆಲವೊತ್ತಿನ ಬಳಿಕ ಮಾತನಾಡಿದ ಉಮಾಪತಿ, ಮೂರು ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮೊದಲು ಕೆಲಸಗಳನ್ನು ಪೂರ್ಣಗೊಳಿಸಿ ಬಳಿಕ ಟೋಲ್ ಶುಲ್ಕ ಪಡೆಯಬೇಕು. ಇಲ್ಲದಿದ್ದರೆ ರಸ್ತೆಯಲ್ಲಿ ನಿಮ್ಮನ್ನು ಓಡಾಡಲು ನಾನು ಸೇರಿದಂತೆ ಜನರು ಬಿಡುವುದಿಲ್ಲ. ನಮ್ಮ ರೈತರ ಜಮೀನು ತೆಗೆದುಕೊಂಡು ಅವರಿಗೆ ಸೌಲಭ್ಯ ಕೊಡದಿದ್ದರೆ ಹೇಗೆ?. ಜನರ ಶಾಪ ತಟ್ಟಿದರೆ ನಿಮಗೆ ಒಳ್ಳೆಯದಾಗಲ್ಲ. ಅಂತೆಯೇ ಬೆಂಗಳೂರು-ಮೈಸೂರು ಹೆದ್ದಾರಿ ಸಾವಿನ ರಸ್ತೆ ಎನ್ನುವ ಹೆಸರು ಬರುತ್ತಿದೆ. ಆದ್ದರಿಂದ ಅಪಘಾತ ಕಡಿಮೆ ಮಾಡುವ ಸಂಬಂಧ ಯೋಜನೆ ರೂಪಿಸಿ ಎಂದರು.
ಆದೇಶದ ಬಳಿಕ ಶುಲ್ಕ ಇಳಿಕೆ: ಹಲವು ವರ್ಷದಿಂದ ನಗರದಲ್ಲಿ ವಿವಾದಕ್ಕೆ ಕಾರಣವಾಗಿರುವ ನೀರಿನ ಶುಲ್ಕದ ಬಗ್ಗೆ ಚರ್ಚೆ ನಡೆಯಿತು. 120 ರೂ ಇದ್ದ ನೀರಿನ ಬಿಲ್ ಅನ್ನು 282 ರೂಗೆ ಏಕಾಏಕಿ ಏರಿಕೆ ಮಾಡಿರುವ ಬಗ್ಗೆ ಶಾಸಕರು ಆಕ್ಷೇಪಿಸಿದರು. ಒಮ್ಮೆಲೆ ಇಷ್ಟೊಂದು ದರ ಏರಿಕೆ ಮಾಡಿದರೆ ಬಡಜನರ ಕಥೆ ಏನಾಗಬೇಕು. ದರ ಇಳಿಕೆ ಮಾಡುವ ಬಗ್ಗೆ ಏನು ಕ್ರಮವಾಗಿದೆ ಎಂದು ಪ್ರಶ್ನಿಸಿದರು.
ಜಲಮಂಡಳಿ ಎಇಇ ಮೇಘನಾ ಮಾತನಾಡಿ, 2011ರಲ್ಲಿ ದರ ಏರಿಕೆ ಮಾಡಲಾಗಿತ್ತು. ಪ್ರತಿ ಮೂರು ವರ್ಷಕ್ಕೊಮ್ಮೆ ದರ ಪರಿಷ್ಕರಣೆಯಾಗಬೇಕು. ಆದರೆ 2018ರಲ್ಲಿ ಪರಿಷ್ಕರಿಸಲಾಗಿದೆ. ಇನ್ನು ದರ ಇಳಿಕೆ ಸಂಬಂಧ ನಗರಸಭೆ ಸಭೆಯಲ್ಲಿ ರೆಜ್ಯುಲೆಷನ್ ಮಾಡಿ ಕಳುಹಿಸಲಾಗಿತ್ತು. ಅದರಂತೆ ಕೇಂದ್ರ ಕಚೇರಿಯಿಂದ ಆದೇಶ ಬರಬೇಕಿದೆ. ಬಳಿಕ ಇಳಿಕೆಯಾಗಲಿದೆ ಎಂದರು.
ಸಭೆಯಲ್ಲಿ ಪೌರಾಯುಕ್ತ ಮಂಜುನಾಥ್, ಡಿವೈಎಸ್ಪಿ ಶಿವಮೂರ್ತಿ ಇತರರಿದ್ದರು.