

ಮಂಡ್ಯ: ಸಣ್ಣಪುಟ್ಟ ಕೆಲಸಕ್ಕೆಂದು ರೈತ ಸಂಪರ್ಕಕ್ಕೆ ಕೇಂದ್ರಕ್ಕೆ ಬರುವವರನ್ನು ಸುಮ್ಮನೆ ಅಲೆದಾಡಿಸಬೇಡಿ. ತ್ವರಿತವಾಗಿ ಸ್ಪಂದಿಸಿ ಕೆಲಸ ಮಾಡಿಕೊಡಬೇಕು ಎಂದು ಕೃಷಿ ಅಧಿಕಾರಿಗೆ ಶಾಸಕ ರವಿಕುಮಾರ್ ಗಣಿಗ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಕಚೇರಿಯ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಪರ್ಕ ಕೇಂದ್ರಕ್ಕೆ ರೈತರು ಅತಿ ಹೆಚ್ಚು ಅಲವಂಬಿತವಾಗಿದ್ದಾರೆ. ಆದ್ದರಿಂದ ಅಲ್ಲಿನ ಸಿಬ್ಬಂದಿ ರೈತರಿಗೆ ಸ್ಪಂದಿಸಬೇಕು. ಯಾವ ಸಮಯದಲ್ಲಿ ಬೇಕಾದರೂ ಕೇಂದ್ರಕ್ಕೆ ಭೇಟಿ ನೀಡುತ್ತೇನೆ. ಅವ್ಯವಸ್ಥೆ, ದೂರು ಕೇಳಿಬಾರದಂತೆ ಕೆಲಸ ನಿರ್ವಹಿಸಿ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ ಮಾತನಾಡಿ, ತಾಲೂಕಿನಲ್ಲಿ 43,926 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿದ್ದು, 2150 ಕ್ವಿಂಟಾಲ್ ಬಿತ್ತನೆ ಬೀಜ ಬೇಕಾಗಿದೆ. ಯೂರಿಯಾ ರಸಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ರಸಗೊಬ್ಬರ ಮಾರಾಟಗಾರರೊಂದಿಗೆ ಸಭೆ ನಡೆಸಿ ಯೂರಿಯಾ ಮಾತ್ರವಲ್ಲದೆ ಎಲ್ಲ ರೀತಿಯ ರಸಗೊಬ್ಬರವನ್ನು ಸಮತೋಲನವಾಗಿ ವಿತರಿಸುವಂತೆ ಸೂಚನೆ ನೀಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಕೃಷಿ ಸಚಿವರ ನಮ್ಮ ಜಿಲ್ಲೆಯವರೇ ಆಗಿರುವುದರಿಂದ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಕೊಡಿ. ಸಾವಯವ ಬೆಳೆ ಬಗ್ಗೆ ಜಾಗೃತಿ ಮೂಡಿಸಿ ರೈತರನ್ನು ಪ್ರೋತ್ಸಾಹಿಸಬೇಕು. ಪ್ರಮುಖವಾಗಿ ನಕಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಬಗ್ಗೆ ಎಚ್ಚರವಹಿಸಿ. ಈ ಸಂಬಂಧ ಸ್ಕ್ವಾಡ್ ರಚಿಸುವಂತೆ ಸೂಚಿಸಿದರು.
ಪೈಲೆಟ್ ಯೋಜನೆ ಯಶಸ್ವಿ: ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪುಷ್ಪಲತಾ ಮಾತನಾಡಿ, ರೈತರು ತೋಟಗಾರಿಕೆ ಬೆಳೆ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಅಂತೆಯೇ ಕಳೆದ ಸಾಲಿನಲ್ಲಿ ಕಾಳಮೆಣಸು ಬೆಳೆಸುವ ಕಾರ್ಯಕ್ರಮವನ್ನು ಪೈಲೆಟ್ ಯೋಜನೆಯಾಗಿ ತೆಗೆದುಕೊಂಡು ಯಶಸ್ವಿಯಾಯಿತು. ಈ ಬಾರಿ ಜಾಯಿಕಾಯಿ ಬೆಳೆಯುವ ಯೋಜನೆ ರೂಪಿಸಲಾಗಿದೆ. ದುದ್ದ ಭಾಗದಲ್ಲಿ 0.5 ಹೆಕ್ಟೇರ್ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಬೆಳೆಯಲಾಗುವುದು. ಇದರೊಟ್ಟಿಗೆ ನರೇಗಾ ಯೋಜನೆಯಡಿ ಡ್ರಾೃಗನ್ ಫ್ರೂಟ್ ಬೆಳೆಯಲು ರೈತರು ಆಸಕ್ತಿ ತೋರುತ್ತಿದ್ದಾರೆ ಎಂದು ವಿವರಿಸಿದರು. ರವಿಕುಮಾರ್ ಗಣಿಗ ಮಾತನಾಡಿ, ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಅನುದಾನಕ್ಕೆ ಯಾವುದೇ ತೊಂದರೆ ಇಲ್ಲ. ಆದ್ದರಿಂದ ಕ್ರಿಯಾಯೋಜನೆ ರೂಪಿಸಿ ಕೊಡಿ. ಅದಕ್ಕೆ ತಕ್ಕಂತೆ ಅನುದಾನ ಕೊಡಿಸಲಾಗುವುದು ಎಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಮಾತನಾಡಿ, ಭೂ ಒಡೆತನ ಯೋಜನೆಯಡಿ ಕಾರ್ಮಿಕರಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘಕ್ಕೆ ಸಹಾಯಧನ ನೀಡುವ ಯೋಜನೆ ಇವೆ. ಅಂತೆಯೇ ಅನುಮತಿ ಕೊಟ್ಟರೆ ಕೊಳವೆಬಾವಿ ಕೊರೆಸುವ ಕೆಲಸ ಪ್ರಾರಂಭಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಸರ್ಕಾರದ ಯೋಜನೆ ಬಡವರಿಗೆ ತಲುಪಬೇಕು. ಉಳ್ಳವರಿಗೆ ಸೌಲಭ್ಯ ಕೊಡುವುದು ಬೇಡ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚನೆ ನೀಡಿದರು.
ಶಿಕ್ಷಕರ ನೇಮಕ ಸಂಬಂಧ ಚರ್ಚೆ: ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ್‌ಕುಮಾರ್ ಮಾತನಾಡಿ, ಪ್ರಾಥಮಿಕ ಶಾಲೆಯಲ್ಲಿ 66 ಮತ್ತು ಪ್ರೌಢಶಾಲೆಯಲ್ಲಿ 19 ಶಿಕ್ಷಕರ ಕೊರತೆ ಇದ್ದು, ಸರ್ಕಾರ ಮತ್ತು ಡಿಡಿಪಿಐ ಅವರ ಮಾರ್ಗದರ್ಶನದಂತೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ವ್ಯಾಪ್ತಿಯ 22 ಪ್ರೌಢಶಾಲೆಗಳಲ್ಲಿ ಶೇ.100ರಷ್ಟು ಸಾಧನೆ ಮಾಡಲಾಗಿದೆ. ಹೋಬಳಿವಾರು ಮತ್ತು ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆ ತೆರೆದರೆ ಮಕ್ಕಳಿಗೆ ಅನುಕೂಲವಾಗಲಿದೆ. ಈ ಬಗ್ಗೆ ತಾವು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಬೇಕು. ಇನ್ನು ಹಲವು ಶಾಲೆಗಳ ಕಟ್ಟಡಗಳು ದುರಸ್ತಿಗೆ ಬಂದಿದ್ದು, ಈ ಪೈಕಿ 35 ಶಾಲೆಗಳು ಹೆಂಚಿನ ಮನೆಯಲ್ಲಿ ನಡೆಯುತ್ತಿರುವುದರಿಂದ ಯಾವಾಗ ಬೀಳುತ್ತವೋ ಎಂಬ ಆತಂಕ ಮೂಡಿದೆ. ಆದ್ದರಿಂದ ಈ ಸಂಬಂಧ ತುರ್ತುನಿಧಿ ಎಂದು ಕೊಟ್ಟರೆ ದುರಸ್ತಿ ಮಾಡಲು ಅನುಕೂಲವಾಗಲಿದೆ. ಅಂತೆಯೇ ಮಂಡ್ಯ ತಾಲೂಕು ಗ್ರಾಮಾಂತರ ಪ್ರದೇಶದ ಪೋಷಕರು ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದ್ದರಿಂದ ಎಲ್‌ಕೆಜಿ ಹಂತದಿಂದಲೇ ಇಂಗ್ಲಿಷ್ ತರಗತಿಗಳನ್ನು ಆರಂಭಿಸಲು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮಂಡ್ಯ ವಿಧಾನಸಭಾ ಕ್ಷೇತ್ರದ ದಕ್ಷಿಣ ವಲಯ ಮತ್ತು ಉತ್ತರ ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೊರತೆಯಿರುವ ಶಿಕ್ಷಕರ ನೇಮಕಾತಿ ಸಂಬಂಧ ಸಂಬಂಧಿಸಿದ ಸಚಿವರು ಹಾಗೂ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು. ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯು 2ನೇ ಸ್ಥಾನ ಪಡೆದಿದ್ದು, ಈ ಸಾಲಿನಲ್ಲಿ ಒಂದನೇ ಸ್ಥಾನ ಪಡೆಯುವಂತೆ ಈಗಿನಿಂದಲೇ ಕಾರ್ಯೋನ್ಮುಖರಾಗುವಂತೆ ಶಿಕ್ಷಕರಿಗೆ ಸೂಚಿಸುವಂತೆ ಸೂಚಿಸಿದರು.
ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸೌಭಾಗ್ಯ ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ 138 ಶಿಕ್ಷಕರ ಕೊರತೆ ಇದೆ. ಡಿಡಿಪಿಐ ಅವರ ಸೂಚನೆಯಂತೆ 138 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟು 13,223 ವಿದ್ಯಾರ್ಥಿಗಳಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 24 ಪ್ರೌಢಶಾಲೆಗಳು ಶೇ.100ರಷ್ಟು ಸಾಧನೆ ಮಾಡಿವೆ ಎಂದು ಸಭೆಗೆ ವಿವರಿಸಿದರು.
ಜಾಗ ಮಂಜೂರಿಗೆ ಸೂಚನೆ: ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕಾವ್ಯಶ್ರೀ ಮಾತನಾಡಿ, ತಾಲೂಕಿನಲ್ಲಿ 16 ವಸತಿ ನಿಲಯಗಳಿದ್ದು, ಈ ಪೈಕಿ 2 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಬಂದೀಗೌಡ ಬಡಾವಣೆಯಲ್ಲಿ ಒಂದು ವಸತಿ ನಿಲಯದ ಕಟ್ಟದ ಕಾಮಗಾರಿ ನಡೆಯುತ್ತಿದ್ದು, ಮತ್ತೊಂದಕ್ಕೆ ಸ್ಥಳ ಬೇಕಾಗಿದೆ. ತಾವು ಸ್ಥಳವನ್ನು ಕೊಡಿಸಿದರೆ ಕಟ್ಟಡವನ್ನು ಕಟ್ಟಲಾಗುವುದು. ಇದಕ್ಕೆ ಸ್ಪಂದಿಸಿದ ಶಾಸಕ, ಕೂಡಲೇ ಜಾಗ ಮಂಜೂರು ಮಾಡುವ ಸಂಬಂಧ ತುರ್ತು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ತಾಲೂಕಿನ ಬಸರಾಳು ಹಾಗೂ ಕೆರಗೋಡು ಭಾಗದಲ್ಲಿ 30 ಹಾಸಿಗೆ ವ್ಯವಸ್ಥೆಯ ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲು ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡಗೆ ತಿಳಿಸಿದ ಅವರು, ಹಾಸ್ಟೆಲ್‌ಗಳಿಗೆ ಸರಬರಾಜಾಗುವ ತರಕಾರಿಗಳ ಬಗ್ಗೆ ಗಮನಹರಿಸಬೇಕು. ಕಳಪೆ ತರಕಾರಿ ವಿತರಣೆ ಮಾಡಿದರೆ ನೋಟಿಸ್ ಕೊಡಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಕೊಡುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುತ್ತಿರಬೇಕು ಎಂದರು.
ತಾ.ಪಂ ಆಡಳಿತಾಧಿಕಾರಿ ಬಾಬು, ಇಒ ವೇಣು, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್, ಉಪ ತಹಸೀಲ್ದಾರ್ ವಸಂತ್, ನರೇಗಾ ಸಹಾಯಕ ನಿರ್ದೇಶಕ ಮಲ್ಲೇಶ್, ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ಶ್ರೀಧರ್ ಇತರರಿದ್ದರು.