ಬೂದನೂರು ಉತ್ಸವಕ್ಕೆ ಉಸ್ತುವಾರಿ ನೇಮಿಸಿ: ಶಾಸಕ ರವಿಕುಮಾರ್ ಗಣಿಗ ಸೂಚನೆ

MLA meeting on Budanur festival mandya
Published on

ಮಂಡ್ಯ: ತಾಲೂಕಿನ ಬೂದನೂರು ಗ್ರಾಮದಲ್ಲಿ ಮಾ.2 ಹಾಗೂ 3ರಂದು ನಡೆಯಲಿರುವ ಉತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಪ್ರಮುಖವಾಗಿ ಎಲ್ಲಿಯೂ ಲೋಪವಾಗದಂತೆ ಎಚ್ಚರಿಕೆ ವಹಿಸುವುದರ ಜತೆಗೆ ಪ್ರತ್ಯೇಕ ಸಮಿತಿಗೆ ಉಸ್ತುವಾರಿಗಳನ್ನು ನೇಮಿಸುವಂತೆ ಶಾಸಕ ರವಿಕುಮಾರ್ ಗಣಿಗ ಸೂಚನೆ ನೀಡಿದರು.

ಬೂದನೂರು ಗ್ರಾಮದಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ಸವವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ವೇದಿಕೆ, ಆಹಾರ, ಸ್ವಾಗತ, ಸೇರಿದಂತೆ ವಿವಿಧ ಸಮಿತಿ ರಚಿಸಲಾಗಿದೆ. ಕಾರ್ಯಕ್ರಮಗಳು ಉತ್ತಮವಾಗಿ ಸಂಘಟಿಸಲು ಕಾರ್ಯ ಪ್ರವೃತ್ತರಾಗಬೇಕು. ಎರಡು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ವಿವಿಧ ಬಗೆಯ ಆಚರಣೆಗಳು ಇರುವ ಕಾರಣ ಎಲ್ಲವುದಕ್ಕೂ ಪ್ರತ್ಯೇಕ ತಂಡ ರಚನೆಯಾಗಲಿದೆ. ಪ್ರಮುಖವಾಗಿ ಆಹಾರ, ವೇದಿಕೆ, ಸಾಂಸ್ಕೃತಿಕ, ವೈದ್ಯಕೀಯ, ದೀಪಾಲಂಕಾರ ತಂಡ ಪ್ರತ್ಯೇಕ ಹಾಗೂ ಭದ್ರತೆ ಜತೆಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ನಿರ್ವಹಣೆ ಮಾಡಬೇಕೆಂದು ಸೂಚಿಸಿದರು.

ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛವಾಗಿರಬೇಕು. ಸಣ್ಣಪುಟ್ಟ ರಸ್ತೆ ದುರಸ್ತಿ ಕೆಲಸಗಳಿದ್ದಲ್ಲಿ ಅವುಗಳನ್ನು ಶೀಘ್ರವಾಗಿ ಪ್ರಾರಂಭಿಸಿ ಪೂರ್ಣಗೊಳಿಸಬೇಕು. ಇದೇ ಮೊದಲ ಬಾರಿಗೆ ಗ್ರಾಮ ಮಟ್ಟದಲ್ಲಿ ಉತ್ಸವ ಆಯೋಜನೆ ಮಾಡಲಾಗುತ್ತಿದೆ. ಆದ್ದರಿಂದ ಎಲ್ಲವೂ ಅಚ್ಚುಕಟ್ಟಾಗಿ ನಡೆಯಬೇಕು. ಜನರಿಗೆ ಅನುಕೂಲವಾಗುವಂತೆ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಉತ್ಸವವನ್ನು ಯಶಸ್ವಿಗೊಳಿಸಬೇಕಿರುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಉತ್ಸವದಿಂದ ಗ್ರಾಮದ ಹೆಸರು ಇತಿಹಾಸದ ಪುಟ ಸೇರಲಿದೆ. ಈ ಬಾರಿ ಪ್ರಾರಂಭವಾಗುತ್ತಿರುವ ಉತ್ಸವ ಮುಂದುವರೆದುಕೊಂಡು ಹೋಗಲಿದೆ. ಅದನ್ನು ಕಾಪಾಡಿಕೊಂಡು ಹೋಗಬೇಕಾದ ಹೊಣೆ ಗ್ರಾಮಸ್ಥರ ಮೇಲಿದೆ. ಇದು ಸರ್ಕಾರಿ ಕಾರ್ಯಕ್ರಮವೂ ಆಗಿರುವುದರಿಂದ ಕೆಲವೊಂದು ಶಿಷ್ಠಾಚಾರವಿರುತ್ತದೆ. ಆದ್ದರಿಂದ ಬೇಸರ ಮಾಡಿಕೊಳ್ಳುವುದು ಬೇಡ. ಕಾರಣ, ಕೆಲವೊಂದು ಕಟ್ಟುಪಾಡು ಇರಲಿದೆ. ಉತ್ಸವ ಕುರಿತಂತೆ ಈಗಾಗಲೇ ಪ್ರಚಾರ ನಡೆಯುತ್ತಿದೆ. ಗ್ರಾಮಸ್ಥರು ಕೂಡ ತಮ್ಮವರಿಗೆ ಮಾಹಿತಿ ಕೊಡಿ. ಪಕ್ಷಾತೀತವಾಗಿ ಹಾಗೂ ಎಲ್ಲರ ಬೆಂಬಲದೊಂದಿಗೆ ಯಶಸ್ವಿಯಾಗಿ ಮಾಡೋಣ ಎಂದು ಮನವಿ ಮಾಡಿದರು.

ಸಭೆಯಲ್ಲಿ ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net