ವೈದ್ಯರಿಗೆ ತೊಂದರೆ ನೀಡುತ್ತಿರುವವ ವಿರುದ್ಧ ದೂರು

IMG-20250915-WA0019
ನುಗ್ಗೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಕುಂದು ಕೊರತೆ ಸಭೆ ನಡೆಯಿತು. ಡಾ.ಪ್ರವೀಣ್, ಡಾ.ರಾಘವೇಂದ್ರ, ಡಾ. ಸುಹಾಸ್, ದೊರೆಸ್ವಾಮಿ ಇದ್ದರು.
Published on

ನುಗ್ಗೇಹಳ್ಳಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗೆ ತೊಂದರೆ ನೀಡುವುದು ಹಾಗೂ ಅನಧಿಕೃತವಾಗಿ ಆಸ್ಪತ್ರೆಯ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ವೈದ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಜೀವ ಉಳಿಸುವ ವೈದ್ಯರನ್ನು ದೇವರಂತೆ ಕಾಣಬೇಕು. ಆದರೆ ನುಗ್ಗೇಹಳ್ಳಿ ಆರೋಗ್ಯ ಕೇಂದ್ರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕುಚೇಷ್ಟೆಗಾಗಿ ಕೆಲವರು ಸೋಶಿಯಲ್ ಮೀಡಿಯಾ ಹೆಸರೇಳಿಕೊಂಡು ಆಸ್ಪತ್ರೆಯ ವಿಡಿಯೋ ಚಿತ್ರೀಕರಣ ಮಾಡಿ ತೊಂದರೆ ಕೊಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗೆ ಆಸ್ಪತ್ರೆಯ ಪರವಾಗಿ ದೂರು ನೀಡಿದ್ದೇನೆ. ಆಸ್ಪತ್ರೆಗೆ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಜತೆಗೆ ತಕ್ಷಣ ಸ್ವಂತ ಹಣದಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದಾಗಿ ತಿಳಿಸಿದರು.

5 ಕೋಟಿ ರೂ. ವೆಚ್ಚದಲ್ಲಿ ಸುಸರ್ಜಿತವಾಗಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗಿದೆ. ಜತೆಗೆ ಆಸ್ಪತ್ರೆಯ ಎಬಿಆರ್‌ಕೆ ಖಾತೆಯಲ್ಲಿ 35 ಲಕ್ಷ ರೂ. ಅನುದಾನ ಇರಿಸಲಾಗಿದೆ. ಮಧುಮೇಹ ರೋಗಿಗಳಿಗೆ 1.25 ಲಕ್ಷ ರೂ. ವೆಚ್ಚದಲ್ಲಿ ರಕ್ತಪರೀಕ್ಷಾ ಯಂತ್ರ ಖರೀದಿಸಿ, 200 ರೂ.ಗೆ ರಕ್ತ ಪರೀಕ್ಷೆ ಮಾಡಲು ದರ ನಿಗದಿ ಮಾಡಲಾಗಿದೆ. ಖಾಸಗಿಯಲ್ಲಿ ಇದೇ ಪರೀಕ್ಷೆಗೆ 900 ರಿಂದ 1000 ರೂ. ಕೊಡಬೇಕಾಗಿತ್ತು ಎಂದು ತಿಳಿಸಿದರು.

ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರವೀಣ್ ಮಾತನಾಡಿ, ಅನಧಿಕೃತವಾಗಿ ಆಸ್ಪತ್ರೆ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿದ್ದರೂ ಅನ್ಯ ಉದ್ದೇಶಕ್ಕಾಗಿ ನಮ್ಮನ್ನು ಹೆದರಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.

ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಮಹಾದೇವಮ್ಮ, ತಾಪಂ ಮಾಜಿ ಉಪಾಧ್ಯಕ್ಷ ಎಚ್.ಜೆ.ಕಿರಣ್, ಕೆಡಿಪಿ ಸದಸ್ಯ ಸಮಿವುಲ್ಲಾ ಖಾನ್, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಸ್.ಲಕ್ಷ್ಮಣ್, ಗ್ರಾಪಂ ಅಧ್ಯಕ್ಷ ಮಂಜುನಾಥ್, ವೈದ್ಯರಾದ ಡಾ.ಸುಹಾಸ್, ಡಾ.ರಾಘವೇಂದ್ರ, ಕಸಾಪ ಹೋಬಳಿ ಅಧ್ಯಕ್ಷ ದೊರೆಸ್ವಾಮಿ, ರೈತ ಸಂಘದ ಮುಖಂಡರಾದ ಅರಳಾಪುರ ಮಂಜೇಗೌಡ, ಸಮುದ್ರಹಳ್ಳಿ ರಾಮಚಂದ್ರು, ಮುಖಂಡರಾದ ಮೊಹಮ್ಮದ್ ಜಾವಿದ್, ಗೌಡಕಿ ಮಂಜು, ರೇಣುಕಮ್ಮ, ಬಸವನಪುರ ಯೋಗಾನಂದ್, ಹುಲಿಕೆರೆ ಸಂಪತ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net