ಆಲೂರು: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆ.15ರಂದು ಸಂಭ್ರಮ ಮತ್ತು ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನ ಆಚರಿಸಲು ನಿರ್ಧರಿಸಲಾಗಿದ್ದು, ಎಲ್ಲ ಇಲಾಖೆ ಅಧಿಕಾರಿಗಳು, ಸಂಘ-ಸಂಸ್ಥೆಗಳು ಹಾಗೂ ಕನ್ನಡಪರ ಸಂಘಟನೆಗಳು ಕೈಜೋಡಿಸಿ ಯಶಸ್ವಿಗೆ ಸಹಕರಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಲೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಭಾಗವಹಿಸಬೇಕು. ವರ್ಷಕ್ಕೊಮ್ಮೆ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಕೆಲ ಇಲಾಖೆ ಅಧಿಕಾರಿಗಳು ಗೈರಾಗಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ್ ಅವರಿಗೆ ಸೂಚಿಸಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ, ಆ.15ರಂದು ತಾಲೂಕು ಕ್ರೀಡಾಂಗಣದಲ್ಲಿ ಅಧಿಕಾರಿಗಳು ಹಾಜರಿದ್ದು, ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಜತೆಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪ ಅಳವಡಿಸುವುದರ ಜತೆಗೆ ತಪ್ಪದೆ ಧ್ವಜಾರೋಹಣ ನೆರವೇರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಾಪಂ ಇಒ ಸುಬ್ರಮಣ್ಯ ಶರ್ಮಾ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಬಿಜೆಪಿ ಅಧ್ಯಕ್ಷ ಉಮಾ ರವಿಪ್ರಕಾಶ್, ತಾಲೂಕು ವೀರಶೈವ ಹಿರಿಯ ಮುಖಂಡ ರೇಣುಕಾಪ್ರಸಾದ್, ಬಿ.ಸಿ.ಶಂಕರಾಚಾರ್ಯ, ತಾಲೂಕು ನೌಕರರ ಸಂಘದ ಅಧ್ಯಕ್ಷ ವರದರಾಜು, ಗೇಕರವಳ್ಳಿ ಬಸವರಾಜ್, ರಂಗಯ್ಯ, ದೇವರಾಜು, ಶಿಕ್ಷಕ ಶ್ರೀಕಾಂತ್, ಅಧಿಕಾರಿಗಳು ಉಪಸ್ಥಿತರಿದ್ದರು.