ಭೂಮಿ ಸ್ವಾಧೀನಕ್ಕೆ ಅವಕಾಶ ನೀಡಲ್ಲ

Nandagudi 2 rm Sharath Sabe
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ, ಅಗತ್ಯ ಬಿದ್ದರೆ ನಿಮ್ಮ ಹೋರಾಟದಲ್ಲಿ ನಾನು ಭಾಗಿಯಾಗುತ್ತೇನೆ ರೈತರ ಕೃಷಿ ಭೂಮಿ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಂದಗುಡಿಯ ಕಾಡು ಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ಸರ್ಕಾರ ಬೆಂಗಳೂರಿನ ಸಮೀಪದಲ್ಲೇ ಭೂಮಿ ವಶಪಡಿಸಿಕೊಂಡು ಹತ್ತಾರು ವರ್ಷ ಕಳೆದರೂ, ಅ ಪ್ರದೇಶಗಳು ಅಭಿವೃದ್ಧಿ ಕಂಡಿಲ್ಲ, ರೈತರು ಬಿತ್ತನೆ ಮಾಡಿ ಬೆಳೆ ಬೆಳೆಯಲಾಗದೇ ರೈತರ ಪರಿಸ್ಥಿತಿ ಅಧೋಗತಿಯಾಗಿದೆ. ಭೂಮಿ ಒಮ್ಮೆ ಕಳೆದುಕೊಂಡರೆ ಮತ್ತೇ ಸಂಪಾದಿಸಲು ಸಾಧ್ಯವಿಲ್ಲ, ಬೆಂಗಳೂರಿನ ಸುತ್ತಮುತ್ತ 5 ಭಾಗಗಳಲ್ಲಿ ಟೌನ್ ಶಿಪ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ ಮೊದಲು ಮಾಗಡಿ ಭಾಗದಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ಆ ಭಾಗವು ಗುಡ್ಡಗಾಡು ಪ್ರದೇಶವಾಗಿದ್ದು, ಅಲ್ಲಿನ ರೈತರು ಭೂ ಸ್ವಾಧೀನಕ್ಕೆ ಒಪ್ಪಿಗೆ ನೀಡಿದ್ದಾರೆ ಆದರೆ ನಂದಗುಡಿ ಭಾಗದಲ್ಲಿ ಸಮತಟ್ಟಾದ ಕೃಷಿಗೆ ಯೋಗ್ಯವಾದ ಜಾಗವಾಗಿದ್ದು, ನೆಲಮಂಗಲ ಭಾಗದಲ್ಲಿ 18 ಸಾವಿರ ಎಕರೆ ಪ್ರದೇಶದಲ್ಲಿ ಟೌನ್‌ಶಿಪ್ ಸೇರಿ ವಿಮಾನ ನಿಲ್ದಾಣಕ್ಕೆ ನೀಲನಕ್ಷೆ ಸಿದ್ದವಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಮಾಗಡಿ ಭಾಗದಲ್ಲಿ ಮೊದಲ ಆದ್ಯತೆಯಾಗಿದ್ದು, ನಂದಗುಡಿ ಭಾಗದ ಭೂ ಸ್ವಾಧೀನ ಪ್ರಕ್ರಿಯೆ ಕೊನೆಯಾದಾಗಿದೆ, ಸದ್ಯದ ಮಟ್ಟಿಗಂತೂ ಇದರ ಪ್ರಸ್ತಾಪವಿಲ್ಲ ಎಂದರು. ನಂದಗುಡಿ ಭಾಗದ 36 ಹಳ್ಳಿಗಳ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕಡೇ ಸ್ಥಾನದಲ್ಲಿರುವಂತೆ ಸರ್ಕಾರದ ಮಟ್ಟದಲ್ಲಿ ಕಾಳಜಿ ವಹಿಸಿದ್ದು, ರೈತರ ಹೋರಾಟ ನಿರಂತರವಾಗಿ ಮುಂದುವರೆಯಲಿ, ಯಾವುದೇ ಕಾರಣಕ್ಕೂ ನಂದಗುಡಿ ಭಾಗದ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಶಾಸಕರಿಗೆ ಮನವಿ ಪತ್ರ: ಇದೇ ಸಂದರ್ಭದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಭೂ ಸ್ವಾಧೀನ ಪ್ರಕ್ರಿಯೆ ಕೈ ಬೀಡುವಂತೆ ಒತ್ತಾಯಿಸಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net