ನಿರೀಕ್ಷೆ ಹುಸಿಯಾಗಿದೆ, ಸಮಸ್ಯೆ ಎಲ್ಲಿದೆ?

Manjunath-HSK-01
ಹೊಸಕೋಟೆ ತಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಲಿತಾಂಶ ಆತ್ಮಾವಲೋಕನಾ ಸಭೆಯಲ್ಲಿ ಶಾಸಕ ಶರತ್‌ಬಚ್ಚೇಗೌಡ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಧ್ಬನಾಭ್, ತಾಪಂ ಇಒ ಕೆ.ಮಂಜುನಾಥ್ ಹಾಗೂ ತಾಲೂಕಿನ 19 ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಭಾಗಿಯಾಗಿದ್ದರು.
Published on

ಶಾಸಕ ಶರತ್‌ಬಚ್ಚೇಗೌಡ ಪ್ರಶ್ನೆ

ಹೊಸಕೋಟೆಯಲ್ಲಿ ಎಸ್ಸೆಸ್ಸೆಲ್ಸಿ ಲಿತಾಂಶ ಆತ್ಮಾವಲೋಕನ ಸಭೆ


ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ನಿರೀಕ್ಷಿಸಿದಷ್ಟು ಲಿತಾಂಶ ಬರಲಿಲ್ಲ, ಇದಕ್ಕೆ ಕಾರಣ ಏನು? ಸಮಸ್ಯೆ ಎಲ್ಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಖಾರವಾಗಿ ಪ್ರಶ್ನಿಸಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಲಿತಾಂಶ ಆತ್ಮಾವಲೋಕನಾ ಸಭೆಯಲ್ಲಿ ಮಾತನಾಡಿದರು.ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟಿದೆ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ, ಬ್ಯಾಗ್, ಬೈಸಿಕಲ್, ಬಿಸಿಯೂಟ ನೀಡುವುದಲ್ಲದೆ ಉತ್ತಮ ಶಿಕ್ಷಕರನ್ನೂ ನೇಮಿಸಿದೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ಆಶಯದಿಂದ ರಾಜ್ಯದಲ್ಲೇ ಯಾರೂ ಮಾಡಿರದ ಹೊಸ ಪ್ರಯತ್ನ ಮಾಡಲಾಗಿತ್ತು ಆದರೆ ಲಿತಾಂಶದ ಕುಸಿತ ಕಂಡಿರುವುದು ಏಕೆ ಎಂದು ಪ್ರಶ್ನೆ ಮಾಡಿದರು. ವಿದ್ಯಾರ್ಥಿಗಳ ಪಾಲಕ ಸಮಾವೇಶ ಹಮ್ಮಿಕೊಳ್ಳಲಾಯಿತು, ಮನೆಯಲ್ಲಿ ಮಕ್ಕಳಿಗೆ ಪರೀಕ್ಷಾ ತಯಾರಿ ಹೇಗಿರಬೇಕು ಎಂಬ ಬಗ್ಗೆ ತಜ್ಞರಿಂದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿಧ್ಯಾರ್ಥಿಗಳಿಗೆ ತಜ್ಞರಿಂದ ಕಳೆದ 5 ವರ್ಷಗಳ ಪ್ರಶ್ನೆ ಪತ್ರಿಕೆ ಜತೆ ಪರಿಷ್ಕತ ಉತ್ತರಗಳನ್ನೊಳಗೊಂಡ ಪ್ರತಿಗಳನ್ನು ನೀಡಲಾಗಿತ್ತು. ಆನ್ ಲೈನ್ ಮೂಲಕ ನೇರವಾಗಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ತಜ್ಞರಿಂದ ಉತ್ತರ ಕೊಡಿಸಲಾಗಿತ್ತು ಆದರೂ ಕಳೆದ ಬಾರಿಗಿಂತ ಈ ಬಾರಿಯ ಸಾಧನೆ ಕಳಪೆಯಾಗಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಿಕ್ಷಕರು ಜವಾಬ್ದಾರಿ ವಹಿಸಿಕೊಂಡು ಗುಣಮಟ್ಟದ ಪಾಠಗಳನ್ನು ಮಾಡಿದಲ್ಲಿ ಈ ರೀತಿ ತಲೆ ತಗ್ಗಿಸುವ ಪರಿಸ್ಥಿತಿ ಬರುತ್ತಿರಲಿಲ್ಲ, ಈ ಬಾರಿ ಶೇ.20 ಅಂಕ ನೀಡದಿದ್ದರೆ ಇಷ್ಟೂ ಲಿತಾಂಶ ಬರುತ್ತಿರಲಿಲ್ಲವೆನೋ ಎಂದು ಆತಂಕ ವ್ಯಕ್ತಪಡಿಸಿದರು.
ಅನುತ್ತೀರ್ಣ ಹೊಂದಿದವರ ಪರಿಸ್ಥಿತಿ ಏನು?: 2023-24 ನೇ ಸಾಲಿನಲ್ಲಿ 1396 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ, ಉತ್ತೀರ್ಣರಾಗಿದ್ದು 1042 ಮಾತ್ರ, ಇನ್ನುಳಿದ 354 ವಿದ್ಯಾರ್ಥಿಗಳ ಭವಿಷ್ಯ ಏನು ಎಂದು ಪ್ರಶ್ನಿಸಿದ ಶಾಸಕರು, ಶಿಕ್ಷಕರು ಇನ್ನು ಹೆಚ್ಚಿನ ಕಾಳಜಿ ವಹಿಸಿದ್ದರೆ ಅನುತ್ತೀರ್ಣರಾದ ವಿದ್ಯಾರ್ಥಿಗಳ ಭವಿಷ್ಯ ಉತ್ತಮಗೊಳಿಸಬಹುದಾಗಿತ್ತು ಆದರೆ ಏಕೆ ಅದರ ಬಗ್ಗೆ ಗಮನ ಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯಾವ ವಿಷಯದಲ್ಲಿ ಮಕ್ಕಳಿಗೆ ಕೊರತೆಯಾಗಿದೆ ಎಂದು ತಿಳಿಯಲು ಮುಂದಿನ ದಿನದಲ್ಲಿ ವಿಷಯವಾರು ಶಿಕ್ಷಕರ ಸಭೆ ಕರೆಯುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಶಾಲೆಯ ಸಮಸ್ಯೆ ತಿಳಿಸಿ: ಶಾಲೆಗಳಲ್ಲಿ ಸಮಸ್ಯೆ ಇದ್ದಲ್ಲಿ ಖುದ್ದು ಶಾಲಾ ಮುಖ್ಯ ಶಿಕ್ಷಕರೇ ನನ್ನನ್ನು ಭೇಟಿ ಮಾಡಿ ಸಮಸ್ಯೆ ತಿಳಿಸಿ, ನಿಮಗಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇನೆ, ಆದರೆ ನಿರ್ಲಕ್ಷ್ಯ ಮನೋಭಾವ ಸಹಿಸೊಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net