ಅಭಿವೃದ್ಧಿ ಕಾರ್ಯಕ್ಕೆ ತಡೆಯೊಡ್ಡಿದ ಸರ್ಕಾರ, ಶಾಸಕ ಮಹೇಶ ಟೆಂಗಿನಕಾಯಿ ಆರೋಪ

Published on

ಹುಬ್ಬಳ್ಳಿ: ಹಿಂದಿನ ಬಿಜೆಪಿ ಸರ್ಕಾರವು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಸೇರಿ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿಗಾಗಿ 43 ಕೋಟಿ ರೂ. ಮಂಜೂರಿ ನೀಡಿತ್ತು. ಆದರೆ, ಪ್ರಸ್ತುತ ರಾಜ್ಯ ಸರ್ಕಾರ ಈ ಪೈಕಿ ಸುಮಾರು 30 ಕೋಟಿ ರೂ. ಕೆಲಸಗಳಿಗೆ ತಡೆ ನೀಡಿದೆ ಎಂದು ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪ್ರಮುಖ ರಸ್ತೆಗಳ ಕಾಂಕ್ರೀಟಿಕರಣ, ಒಳಚರಂಡಿ ಮುಂತಾದ ಕಾಮಗಾರಿಗಳು ಈ ಅನುದಾನದಲ್ಲಿ ನಡೆಯಬೇಕಾಗಿತ್ತು. ಬಹಳಷ್ಟು ಕಾಮಗಾರಿಗಳು ಟೆಂಡರ್ ಹಂತದಲ್ಲಿ ಇದ್ದಾಗ ಸರ್ಕಾರ ಇವುಗಳನ್ನು ನಿಲ್ಲಿಸಲು ಸೂಚನೆ ನೀಡಿದೆ. ಇದರಿಂದಾಗಿ ಜನರಿಗೆ ನೀಡಿದ ಭರವಸೆಗಳು ಈಡೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಯಾವುದೇ ನಗರದಲ್ಲಿ ಇಂತಹ ಪ್ರಸಂಗಗಳು ನಡೆದಿಲ್ಲ. ಇಲ್ಲಿ ಮಾತ್ರ ಸ್ಥಳಿಯ ನಾಯಕರೊಬ್ಬರ ಒತ್ತಡದಿಂದಾಗಿ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಿಗೆ ಕೊಕ್ಕೆ ಹಾಕಿದ್ದಾರೆ. ಯಾರೇ ಆಗಲಿ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸುವುದು ಸರಿಯಲ್ಲ. ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇನ್ನಷ್ಟು ವಿವರ ಪಡೆದುಕೊಂಡು ಮುಂದೇನು ಮಾಡಬೇಕೆಂದು ನಿರ್ಧರಿಸುವೆ ಎಂದು ಹೇಳಿದರು.

25 ಪ್ರಶ್ನೆ ಕೇಳಿರುವೆ:
ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಉತ್ತಮ ಚರ್ಚೆಯಾಗಿವೆ. ನಾನು ಕೂಡ 31 ಇಲಾಖೆಗಳಿಗೆ ಸಂಬಂಧಿಸಿ 25 ಪ್ರಶ್ನೆಗಳನ್ನು ಕೇಳಿರುವೆ. ಅದರಲ್ಲಿ ವಿಶೇಷವಾಗಿ ಗಂಗೂಬಾಯಿ ಹಾನಗಲ್ಲ ಗುರುಕುಲಕ್ಕೆ ಅನುದಾನ ಬಿಡುಗಡೆ ಸೇರಿ ವಿವಿಧ ವಿಷಯಗಳು ಚರ್ಚೆಯಾಗಿವೆ. ಹುಬ್ಬಳ್ಳಿಗೆ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಮಂಜೂರಾಗಲಿದೆ ಎಂದರು.

ಎ್ಎಂಸಿಜಿ ಕ್ಲಸ್ಟರ್:
ಧಾರವಾಡದಲ್ಲಿ ಎ್ಎಂಸಿಜಿ ಕ್ಲಸ್ಟರ್ ನಿರ್ಮಾಣದ ಕನಸು ನನಸು ಮಾಡಲು ಈಗಿನ ಸರ್ಕಾರ ಮುತುವಜಿರ್ ವಹಿಸಬೇಕು. ಬಿಜೆಪಿ ಸರ್ಕಾರ ಎಕರೆಗೆ 98 ಲಕ್ಷ ರೂ. ನಿಗದಿ ಮಾಡಿತ್ತು. ಆದರೆ, ಈಗಿನ ಸರ್ಕಾರ 1.38 ಕೋಟಿ ರೂ. ವಿಧಿಸುತ್ತಿದೆ. ಇದರಿಂದ ಉದ್ಯಮಿಗಳು ಹಿಂದೆ ಸರಿಯುವ ಸಾಧ್ಯತೆ ಇದೆ. ಈ ಬಗ್ಗೆ ಕೈಗಾರಿಕೆ ಸಚಿವರಿಗೆ ಮನವರಿಕೆ ಮಾಡಿರುವೆ. ಸರ್ಕಾರ ಧನಾತ್ಮಕವಾಗಿ ಆಲೋಚಿಸಿದರೆ ಹೆಚ್ಚಿನ ಕಂಪನಿಗಳು ಕ್ಲಸ್ಟರ್ನಲ್ಲಿ ಬರಲಿವೆ ಎಂದರು.

ಬಿಯಾಂಡ್ ಬೆಂಗಳೂರು ಪರಿಕಲ್ಪನೆ ಜಾರಿಯಾಗುತ್ತಿಲ್ಲ. ಐಟಿ ಕಂಪನಿಗಳು ಈ ಭಾಗಕ್ಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶಾಸಕ ಟೆಂಗಿನಕಾಯಿ ಅವರು, ಹುಬ್ಬಳ್ಳಿ ಧಾರವಾಡವನ್ನು ಟೂರಿಸಂ ಹಬ್ ಆಗಿ ಪರಿವತಿರ್ಸುವ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಚಚಿರ್ಸಿರುವೆ. ನೃಪತುಂಗ ಬೆಟ್ಟದಲ್ಲಿ ಜಿಪ್ಲೈನ್ ಆಗಬೇಕು. ಇಲ್ಲಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಸೌಲಭ್ಯಗಳನ್ನು ನೀಡಬೇಕು ಎಂದು ಕೋರಿದ್ದೇನೆ ಎಂದರು.

ಫ್ಲೈಓವರ್ ಜಂಟಿ ಸಭೆ:
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ್ಲೆ$ಓವರ್ ಕಾಮಗಾರಿಯು ನಿಧಾನವಾಗಿದೆ. ನಿಗದಿತ ಅವಧಿಯಲ್ಲಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಬರೀ ಶೇ. 40ರಷ್ಟು ಕೆಲಸ ಮುಗಿದಿದೆ. ಹಾಗಾಗಿ ಮುಂದಿನ ವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹಾಗೂ ತಾವು ಸೇರಿ ಅಧಿಕಾರಿಗಳೊಂದಿಗೆ ಸಭೆ ಮಾಡಲಿದ್ದೇವೆ.

ಅಡೆತಡೆಗಳ ಬಗ್ಗೆ ಚರ್ಚೆ ಮಾಡಿ ಕಾಮಗಾರಿಗೆ ವೇಗ ನೀಡಲು ಪ್ರಯತ್ನಿಸಲಾಗುವುದು ಎಂದರು.
ಒಟ್ಟಾರೆ, ಅಧಿವೇಶನದಲ್ಲಿ ಕ್ಷೇತ್ರದ ಜನರ ಧ್ವನಿಯಾಗಿ ಮಾತನಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಇದಕ್ಕೆ ಯಾರೇ ಆಗಲಿ ಅಡ್ಡಿಪಡಿಸುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.
ಮಾಧ್ಯಮ ವಕ್ತಾರ ರವಿ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net