ಶಾಸಕ ಮಂಜುನಾಥ್ ಕಾಂಗ್ರೆಸ್ ಸೇರುವುದನ್ನು ಒಪ್ಪುವುದಿಲ್ಲ

ESWAR
ಈಶ್ವರ್
Published on

ಹನೂರು: ಕ್ಷೇತ್ರದ ಹಾಲಿ ಶಾಸಕ ಜೆಡಿಎಸ್‌ನ ಎಂ.ಆರ್ ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಯಾಗುವುದನ್ನು ಒಪ್ಪುವುದಿಲ್ಲ. ಒಂದು ವೇಳೆ ಸೇರ್ಪಡೆಯಾದಲ್ಲಿ ಕಾರ್ಯಕರ್ತರೆಲ್ಲರೂ ಒಟ್ಟುಗೂಡಿ ತೀವ್ರವಾಗಿ ವಿರೋಧಿಸಲಾಗುವುದು. ಆದ್ದರಿಂದ ಈ ಬಗ್ಗೆ ಪಕ್ಷದ ವರಿಷ್ಠರು ಮನದಟ್ಟು ಮಾಡಿಕೊಳ್ಳಬೇಕು ಎಂದು ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ತಿಳಿಸಿದರು.

1970 ರಿಂದ ಈವರೆಗೂ ನಡೆದ ಚುನಾವಣೆಯಲ್ಲಿ ದಿ.ರಾಜುಗೌಡ ಕುಟುಂಬ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾ ಬಂದಿದ್ದು, ಹೆಚ್ಚು ಜಯಗಳಿಸುವುದರ ಮೂಲಕ ಸೋಲು, ಗೆಲುವನ್ನು ಕಂಡಿದೆ. ಸತತ 3 ಬಾರಿ ಜಯಗಳಿಸಿದ ಮಾಜಿ ಶಾಸಕ ಆರ್.ನರೇಂದ್ರ ಅವರು ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಜನಮನ್ನಣೆ ಗಳಿಸಿದ್ದಾರೆ. ಇತ್ತ ಪಕ್ಷದ ಸಂಘಟನೆಗೆ ಇವರ ಕೊಡುಗೆ ಅಪಾರ. ಈ ದಿಸೆಯಲ್ಲಿ ಹನೂರು ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಆದರೆ ಕೆಲವು ಕಾರಣಾಂತರದಿಂದ ಈ ಬಾರಿ ಸೋಲಬೇಕಾಯಿತು. ಆದಾಗ್ಯೂ ಕ್ಷೇತ್ರದ ಜನರೊಡನೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದು, ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆದ್ದರಿಂದ ಮುಂಬರುವ ತಾಪಂ, ಜಿಪಂ ಹಾಗೂ ಲೋಕಸಭೆ ಚುನಾವಣೆಗೆ ಆರ್.ನರೇಂದ್ರ ನೇತೃತ್ವದಲ್ಲಿ ಕಾರ್ಯಕರ್ತರೆಲ್ಲರೂ ಒಟ್ಟುಗೂಡಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವುದರ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚಗೆ ಶಾಸಕ ಎಂ.ಆರ್.ಮಂಜುನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳಲ್ಲಿ ಮಂಜುನಾಥ್ ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ? ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಮಂಜುನಾಥ್ ಅವರು ಸುಳ್ಳು ವದಂತಿ ಎಂದು ಹೇಳಿಕೆ ನೀಡಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಒಂದು ವೇಳೆ ಅವರು ಪಕ್ಷಕ್ಕೆ ಸೇರ್ಪಡೆಯಾದಲ್ಲಿ ಕಾರ್ಯಕರ್ತರಲ್ಲಿ ವೈಮನಸ್ಸು ಉಂಟಾಗಲಿದೆ. ಜತೆಗೆ ಪಕ್ಷದ ಸಂಘಟನೆಗೂ ತೊಡಕಾಗಲಿದೆ. ಆದ್ದರಿಂದ ಈ ಬಗ್ಗೆ ಪಕ್ಷದ ವರಿಷ್ಠರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಮಿಟಿ ಸದಸ್ಯ ಪೆದ್ದನಪಾಳ್ಯ ಸಿದ್ದರಾಜು, ಪಪಂ ಸದಸ್ಯರಾದ ಸುದೇಶ್, ಹರೀಶ್‌ಕುಮಾರ್, ಪಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಪಿ.ಜಿ. ಪಾಳ್ಯ ಗ್ರಾಪಂ ಅಧ್ಯಕ್ಷ ಸಂತೋಷ್‌ಕುಮಾರ್, ಮುಖಂಡರಾದ ಚಿಕ್ಕತಮ್ಮಯ್ಯ, ಪಾಳ್ಯ ಕೃಷ್ಣ, ನಿಂಗಶೆಟ್ಟಿ, ಪುಟ್ಟವೀರನಾಯ್ಕ, ಚಂದ್ರು, ನಾಗೇಂದ್ರ, ಜಗದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net