

ಮಹದೇವಪುರ: ಮಹದೇವಪುರ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು ಮತ್ತಿತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಮಂಜುಳಾ ಲಿಂಬಾವಳಿ ಶನಿವಾರ ಚಾಲನೆ ನೀಡಿದ್ದಾರೆ.
ಈ ವೇಳೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮೂಲಭೂತ ಸೌಕರ್ಯಗಳನ್ನು ನೀಡುವುದು ನಮ್ಮ ಮೊದಲ ಕರ್ತವ್ಯ, ಈ ಹಿಂದೆ ಶಾಸಕರಾಗಿದ್ದ ಅರವಿಂದ ಲಿಂಬಾವಳಿ ಅವಧಿಯಲ್ಲೂ ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿದ್ದಾರೆ. ಅವರ ಹಾದಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನಾನು ಕೂಡ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದರು.
ವರ್ತೂರು ಪೊಲೀಸ್ ಠಾಣೆಯಿಂದ ಪಣತ್ತೂರು ಆರ್.ಯು.ಬಿ.ವರೆಗಿನ ಬಳಗೆರೆ ಮುಖ್ಯರಸ್ತೆಯ ಸಮಗ್ರ ಅಭಿವೃದ್ಧಿ, ಹರಳೂರು ವಿಬ್‌ಗಯಾರ್ ಶಾಲೆಯ ಮುಖ್ಯರಸ್ತೆಯಲ್ಲಿ ಸರ್ಜಾಪುರ ರಸ್ತೆಯಿಂದ ಬಿರ್ಲಾ ವೃತ್ತದವರೆಗೆ ಚರಂಡಿ ನಿರ್ಮಾಣ, ದೊಡ್ಡಕನ್ನೆಲ್ಲಿಯ ಸರ್ಜಾಪುರ ರಸ್ತೆಯಿಂದ ಕಾರ್ಮೆಲಾರಾಮ್ ಆರ್‌ಓಬಿ ಮತ್ತು ಜನತಾ ಕಾಲೋನಿ ರಸ್ತೆ, ಆರ್‌ಐ ಮಹದೇವಪುರ ವಿಭಾಗದವರೆಗಿನ ರಸ್ತೆ, ದೇವರಬೀಸನಹಳ್ಳಿ ಗ್ರಾಮದಲ್ಲಿ ಚೈನ್ ಲಿಂಕ್ ಫೆನ್ಸಿಂಗ್ ಕಾಮಗಾರಿ ಮತ್ತು ಸರ್ಕಾರಿ ಶಾಲೆಯಲ್ಲಿ ವಿವೇಕ ಕೊಠಡಿ ಯೋಜನೆಯಡಿ ಎರಡು ಶಾಲಾ ಕೊಠಡಿಗಳ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಾದ ಎನ್.ಎಸ್.ಶ್ರೀಧರ್ ರೆಡ್ಡಿ, ರಾಜಾರೆಡ್ಡಿ, ಮಹೇಂದ್ರ ಮೋದಿ, ಬಿ.ಎಸ್.ಶ್ರೀಧರ್, ಪಿ.ರಕ್ಷಿತ್, ಸುರೇಶ್, ಮಂಜುನಾಥ ರೆಡ್ಡಿ, ಸತ್ಯ ಇನ್ನಿತರರಿದ್ದರು.