

ಹಾನಗಲ್ಲ ಆಶ್ರಯ ಮನೆಗೆ ಮೀಸಲಿಟ್ಟ ರಿಸನಂ. 649ರ 5 ಎಕರೆ ನಿವೇಶನದಲ್ಲಿ ಜಿ+2 ಮನೆಗಳ ನಿರ್ಮಾಣದ ಕುರಿತು ಸ್ಥಳೀಯ ಪುರಸಭೆ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದ ಶಾಸಕ ಶ್ರೀನಿವಾಸ ಮಾನೆ, ನಗರ ವ್ಯಾಪ್ತಿಯಲ್ಲಿ ನಿವೇಶನ ಮತ್ತು ಮನೆ ರಹಿತ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದರು.
ಸ್ಥಳೀಯ ಪುರಸಭೆ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಶಾಸಕರು, ಜಿ+2 ಮನೆಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಸ್ವಂತ ಸೂರಿಗಾಗಿ ಕಾಯುತ್ತಿರುವ ನಿವಾಸಿಗಳ ಕನಸು ನನಸಾಗಿಸೋಣ. ಕೂಡಲೇ ಸಮಗ್ರ ವರದಿ ಸಿದ್ಧಪಡಿಸಿ ಕೊಡಿ. ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.
ನಗರೋತ್ಥಾನ 3 ಮತ್ತು 4ನೇ ಹಂತದ ಕಾಮಗಾರಿ, ಪಟ್ಟಣಕ್ಕೆ ವಿಶೇಷ ಅನುದಾನಗಳ ಅನುಮೋದನೆ, ಈಗಾಗಲೇ ಮಂಜೂರಾದ ಅನುದಾನದ ಬಳಕೆ, ಬಾಕಿ ಅನುದಾನದ ಬಗೆಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಯಾವ ಯಾವ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ, ಟೆಂಡರ್ ಆಗಬೇಕಿರುವ ಕಾಮಗಾರಿಗಳ ಕುರಿತು ವಿವರ ಪಡೆದರು. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಜೂ. 30ರೊಳಗೆ ಆರಂಭಿಸುವಂತೆ ಸೂಚನೆ ನೀಡಿದರು.
ಪ್ರತಿ ತಿಂಗಳು ಕನಿಷ್ಠ 10 ಲಕ್ಷ ರೂ. ತೆರಿಗೆ ಬಾಕಿ ಹಣ ವಸೂಲಿಗೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಮನವೊಲಿಸಿ, ಮೂಲ ಸೌಲಭ್ಯ ಕಲ್ಪಿಸಲು ಸಹಕಾರದ ಅಗತ್ಯವಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ರಸ್ತೆಗಳಿಗೆ ಅವಶ್ಯಕ ಕಾಲುವೆ ನಿರ್ಮಾಣ ಮಾಡಲು ಬೇಕಿರುವ ಅನುದಾನದ ಬಗೆಗೆ ಚರ್ಚಿಸಿ, ಅಂದಾಜು ಪತ್ರಿಕೆ ಸಿದ್ಧಪಡಿಸಿ ಎಂದು ಸೂಚಿಸಿದ ಶಾಸಕ ಮಾನೆ, ನಿಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸೂಚಿಸಿದರು.
ನಗರದಲ್ಲಿ 302 ಅಕ್ರಮ ನಳ ಪತ್ತೆ ಹಚ್ಚಲಾಗಿದ್ದು, ಈ ಪೈಕಿ 82 ನಳಗಳನ್ನು ಸಕ್ರಮಗೊಳಿಸಿ 3.5 ಲಕ್ಷ ರೂ. ನೀರಿನ ಕರ ಬಾಕಿ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಕಿರಿಯ ಇಂಜಿನಿಯರ್ ನಾಗರಾಜ ಮಿರ್ಜಿ, ಅಧಿಕಾರಿಗಳಾದ ಶಿವಾನಂದ ಕ್ಯಾಲಕೊಂಡ, ಅಬ್ದುಲ್ ಉಪ್ಪಿನ, ನಿರ್ಮಲಾ ನಾಗನೂರ ಉಪಸ್ಥಿತರಿದ್ದರು.