

ಲಿಂಗಸುಗೂರು: ಕೇಂದ್ರ-ರಾಜ್ಯ ಸರ್ಕಾರಗಳ ಶೈಕ್ಷಣಿಕ ಪ್ರಗತಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಸರ್ಕಾರದ ಸವಲತ್ತುಗಳನ್ನು ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಬುಧವಾರ ಮಂಜೂರಾದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ವಸತಿ ನಿಲಯಗಳು ಗ್ರಾಮೀಣ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಬಡ ಮಕ್ಕಳಿಗಾಗಿ ತುಂಬಾ ಅನುಕೂಲವಾಗಿವೆ. ಇದೀಗ ಅಲ್ಪಸಂಖ್ಯಾತ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಮಂಜೂರಾಗಿರುವುದು ಅಲ್ಪಸಂಖ್ಯಾತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಯೋಜವಾಗಲಿದೆ ಎಂದರು.
ತಾಲೂಕಿನಲ್ಲಿ ವಸತಿ ನಿಲಯಗಳ ಸಂಖ್ಯೆ ಹೆಚ್ಚಿದ್ದರೂ ಪ್ರತಿವರ್ಷ ಮಕ್ಕಳ ದಾಖಲಾತಿ ಸಂಖ್ಯೆಯೂ ದುಪ್ಪಟ್ಟು ಆಗುತ್ತಿದೆ. ವಸತಿ ನಿಲಯಗಳಿಗೆ ದುಪ್ಪಟ್ಟು ಅರ್ಜಿಗಳು ಬಂದಾಗ ವಸತಿ ನಿಲಯಗಳಲ್ಲಿ ಸ್ಪಲ್ಪ ಅವ್ಯವಸ್ಥೆ ಉಂಟಾಗುವುದು ಸಹಜ. ಸರ್ಕಾರಕ್ಕೆ ಹೆಚ್ಚುವರಿಯಾಗಿ ಪರಿಶಿಷ್ಟ ಜಾತಿ ವಸತಿ ನಿಲಯ ಮಂಜೂರಾತಿಗೆ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಮಾಡಲಾಗಿದೆ. ಗ್ರಾಮೀಣ ಮಕ್ಕಳಿಗೆ ವಸತಿ ನಿಲಯಗಳ ಕೊರತೆ ಮತ್ತು ಸಾರಿಗೆ ಬಸ್‌ಗಳ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ವಸತಿ ನಿಲಯಗಳು ಬಾಡಿಗೆ ಕಟ್ಟಡ ಬದಲು ಸ್ವಂತ ಸರ್ಕಾರಿ ಜಾಗದಲ್ಲಿ ನಿರ್ಮಿಸಿದರೆ ಶಾಶ್ವತ ಪರಿಹಾರ ಸಿಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಎಪಿಎಂಸಿ ನಾಮನಿರ್ದೇಶಿತ ಅಧ್ಯಕ್ಷ ಅಮರೇಶ ಹೆಸರೂರು, ಮೌಲ್ವಿ ಯೂನೂಸ್ ಖಾಸ್ಮಿ, ಫಾ.ಎ.ಜೆ.ಜಾರ್ಜ್, ಪ್ರಮುಖರಾದ ಗಿರಿಮಲ್ಲನಗೌಡ ಪಾಟೀಲ್, ಕೆ.ನಾಗಭೂಷಣ, ಎಕ್ಬಾಲ್ ಹವಾಲ್ದಾರ್, ಮುದುಕಪ್ಪ ನಾಯಕ, ಬಾಬಾಖಾಜಿ, ಪರಶುರಾಮ ನಗನೂರು, ಹುಲ್ಲೇಶ ಸಾಹುಕಾರ ಇತರರಿದ್ದರು.